Home News ಕೆಟ್ಟ ಯಂತ್ರಗಳಿಗೆ ಪೋಲಾಗುತ್ತಿರುವ ನಗರಸಭೆ ಹಣ

ಕೆಟ್ಟ ಯಂತ್ರಗಳಿಗೆ ಪೋಲಾಗುತ್ತಿರುವ ನಗರಸಭೆ ಹಣ

0

ಶಿಡ್ಲಘಟ್ಟದ ಪುರಸಭೆಯು ನಗರಸಭೆಯಾಯಿತು. ಅನುದಾನಗಳು ಹೆಚ್ಚಾಗಿ, ಅಭಿವೃದ್ಧಿ ಹೆಚ್ಚುತ್ತದೆ ಎಂದು ಜನಪ್ರತಿನಿಧಿಗಳು ನೀಡುತ್ತಿರುವ ಆಶ್ವಾಸನೆ ಕೇವಲ ಆಶಾಗೋಪುರದಂತೆ ಕಾಣಿಸುತ್ತಿದೆ. ಅದಕ್ಕೆ ಪೂರಕವಾಗುವಂತೆ ಲಕ್ಷಾಂತರ ಬೆಲೆ ಬಾಳುವ ಹಲವಾರು ಉಪಕರಣಗಳು ಮತ್ತು ವಾಹನಗಳು ನಗರದ ವಿವಿದೆಡೆ ಪಳೆಯುಳಿಕೆಗಳಂತೆ ಕೊಳೆಯುತ್ತಿವೆ.
ನಗರಸಭೆ ಕಟ್ಟಡಕ್ಕೆ ತಿಲಕದಂತೆ ಕಚೇರಿ ಆವರಣದಲ್ಲಿ ಗಾಳಿಯಿಂದ ನೀರನ್ನು ತಯಾರಿಸಬಹುದೆಂದು ಹತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ತರಿಸಿದ ಯಂತ್ರ ಕೆಲಸ ಮಾಡದೆ ಬಿಸಿಲು ಗಾಳಿಗೆ ಮೈಯೊಡ್ಡಿ ನಿಂತಿದೆ. ಅಂಚೆ ಕಚೇರಿ ಮುಂಭಾಗದಲ್ಲಿ ಜೆಸಿಬಿ ಯಂತ್ರವು ತುಕ್ಕುಹಿಡಿಯುತ್ತಾ ನಿಂತಿದ್ದು, ಯಂತ್ರದೊಳಗೆ ನಿಂತ ನೀರು ಹಾಗೂ ಕಸ ತ್ಯಾಜ್ಯವು ಸೊಳ್ಳೆಗಳ ತಾಣವಾಗಿ ಬದಲಾಗಿದೆ. ಸೋಕು ನಿವಾರಕ ಸಿಂಪಡಿಸಿ ರೋಗ ತಡೆಗಟ್ಟಬೇಕಾದ ನಗರಸಭೆ ಇಲ್ಲಿ ಸೋಂಕು ಉತ್ಪಾದನಾ ಘಟಕವಾಗಿದೆ.
ನಗರಸಭೆಯು ತಲಾ 9 ಲಕ್ಷ ರೂಪಾಯಿಗಳು ಬೆಲೆ ಬಾಳುವ ಐದು ಟ್ರಾಕ್ಟರ್ಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಕೆಟ್ಟು ಗೋಡೋನ್ನಲ್ಲಿ ಕೊಳೆಯುತ್ತಿದೆ. ವಿಶೇಷವೆಂದರೆ ಈ ಕೆಟ್ಟಿರುವ ಟ್ರಾಕ್ಟರ್ ರಿಪೇರಿಗೆ ಕಳೆದ ವರ್ಷ 3 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಲಾಗಿದೆ. ಸುಮಾರು 24 ಲಕ್ಷ ರೂಪಾಯಿ ಬೆಲೆಯ ಒಂದು ಜೆಸಿಬಿ ಕಾರ್ಯನಿರ್ವಹಿಸುತ್ತಿದ್ದರೆ, 10 ಲಕ್ಷ ರೂಪಾಯಿಯ ಜೆಸಿಬಿ ಮಾತ್ರ ಹಲವಾರು ವರ್ಷಗಳಿಂದ ತುಕ್ಕುಹಿಡಿದು ನಿಂತಿದೆ. ಇದರೊಂದಿಗೆ ಒಳಚರಂಡಿ ಶುದ್ದೀಕರಿಸುವ 12 ಲಕ್ಷ ರೂಪಾಯಿಗಳ ಯಂತ್ರ, ದೀಪಗಳನ್ನು ದುರಸ್ತಿಗೊಳಿಸುವ 10 ಲಕ್ಷ ರೂಪಾಯಿಗಳ ವೆಚ್ಚದ ಕ್ರೇನ್ ಅಳವಡಿಸಿರುವ ಜೀಪ್, 17 ಲಕ್ಷ ರೂಪಾಯಿಗಳ ಶವಸಾಗಾಣಿಕಾ ವಾಹನವೂ ನಗರಸಭೆಯ ಆಸ್ತಿಯಾಗಿದೆ. ನಗರದ ಹಲವೆಡೆ ಕಸ ಹಾಕಲೆಂದು ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ತಂದಿದ್ದ ಕಂಟೈನರ್ಗಳು ಈಗಾಗಲೇ ಹಲವೆಡೆ ಮಾಯವಾಗಿವೆ.
‘ಸಾರ್ವಜನಿಕರ ಹಣವನ್ನು ನಗರಸಭೆಯವರು ಅವೈಜ್ಞಾನಿಕವಾಗಿ ದುರುಪಯೋಗ ಮಾಡುತ್ತಾ, ಪೋಲು ಮಾಡುತ್ತಾ, ಕಣ್ಣಿಗೆ ರಾಚುವಂತೆ ಕೆಟ್ಟ ಯಂತ್ರಗಳನ್ನಿಟ್ಟುಕೊಂಡು ರಿಪೇರಿಗೆಂದು ಹಣ ಖರ್ಚು ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಈ ಬಗ್ಗೆ ಮೌನದಿಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತವೆ. ಕಸವಿಲೇವಾರಿ, ನೀರಿನ ಸಮರ್ಪಕ ಹಂಚಿಕೆಯೆಡೆಗೆ ಗಮನ ಹರಿಸದೇ ಅಧಿಕಾರಿಗಳು ಕೆಟ್ಟ ಯಂತ್ರಗಳಿಗೆ ಹಣ ಸುರಿಯುತ್ತಿರುವುದು ಕಂಡಾಗ ನಗರದ ಅಭಿವೃದ್ಧಿಯ ಬಗ್ಗೆ ನಿರಾಶೆಯಾಗುತ್ತದೆ’ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.