Home News ಕೆರೆ ಒತ್ತುವರಿಗೆ ರೈತರ ತಡೆ

ಕೆರೆ ಒತ್ತುವರಿಗೆ ರೈತರ ತಡೆ

0

ತಾಲ್ಲೂಕಿನ ನಾಗಮಂಗಲ, ಹೊಸಪೇಟೆ ಮತ್ತು ಕಾಕಚೊಕ್ಕಂಡಹಳ್ಳಿ ಬಳಿ ಕೆರೆ ಒತ್ತುವರಿ ತೆರವುಗೊಳಿಸಲು ಬಂದಿದ್ದ ವಲಯ ಅರಣ್ಯಾಧಿಕಾರಿಗಳನ್ನು ರೈತ ಸಂಘದವರು ತಡೆದು ರೈತರ ಬೆಳೆ ಫಸಲು ಬರುವವರೆಗೂ ನಿಲ್ಲಿಸುವಂತೆ ತಿಳಿಸಿದ ಘಟನೆ ಶುಕ್ರವಾರ ನಡೆದಿದೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೆರೆಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸುತ್ತಾ ಟ್ರೆಂಚ್ ಹಾಕುತ್ತಾ ಗಿಡಗಳನ್ನು ಹಾಕುವ ಕೆಲಸ ನಡೆದಿದೆ. ಆದರೆ ತಾಲ್ಲೂಕಿನ ನಾಗಮಂಗಲ, ಹೊಸಪೇಟೆ ಮತ್ತು ಕಾಕಚೊಕ್ಕಂಡಹಳ್ಳಿ ಬಳಿ ರೈತರು ಒತ್ತುವರಿ ಜಮೀನಿನಲ್ಲಿ ಆಲೂಗಡ್ಡೆ, ಕ್ಯಾರೆಟ್, ಬೀಟ್ರೂಟ್, ಮೆಣಸಿನಕಾಯಿ ಮುಂತಾದ ಬೆಳೆಗಳನ್ನು ಬೆಳೆದಿದ್ದು ಫಸಲು ಬರುವವರೆಗೂ ಬೆಳೆಯನ್ನು ನಾಶಪಡಿಸದಂತೆ ಜೆಸಿಬಿಯನ್ನು ತಡೆದರು.
ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಈ ಮೊದಲೇ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರ ಗಮನಕ್ಕೆ ಬೆಳೆಯನ್ನು ನಾಶಪಡಿಸದಂತೆ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಫಸಲನ್ನು ತೆಗೆಯುವವರೆಗೂ ಕೆರೆ ತೆರವು ಮಾಡಿಸುವುದಿಲ್ಲ, ರೈತರ ಬೆಳೆಗೆ ತೊಂದರೆ ಮಾಡುವುದಿಲ್ಲ, ಆದರೆ ನಂತರ ಟ್ರೆಂಚ್ ಹಾಕಿಸಿ ಅರಣ್ಯ ಇಲಾಖೆಯ ಮೂಲಕ ಸಸಿಗಳನ್ನು ನೆಡಿಸುವುದಾಗಿ ಹೇಳಿದ್ದರು. ಆದರೆ ನಿನ್ನೆ ಯದ್ದಲತಿಪ್ಪೇನಹಳ್ಳಿಯಲ್ಲಿ ಮೆಣಸಿನಕಾಯಿ ಬೆಳೆಯನ್ನು ನಾಶಪಡಿಸಿದ್ದು, ರೈತರಿಗೆ ನಷ್ಟವಾಗಿದೆ. ಇಲ್ಲ ಹಾಗಾಗಕೂಡದು ಎಂದು ತಿಳಿಸಿದರು.
ರೈತರೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಸುಬ್ಬರಾವ್, ಈಗ ಬೆಳೆಯಿರದ ಕಡೆ ಟ್ರೆಂಚ್ ಹಾಕಿಸಲಾಗುತ್ತದೆ. ಉಳಿದ ಕಡೆ ಫಸಲು ಕೊಯ್ಲಾದ ಮೇಲೆ ಕೆಲಸ ಮಾಡಿಸಿ ಒತ್ತುವರಿ ತೆರವುಗೊಳಿಸುತ್ತೇವೆ. ಕೆರೆಯು ಇದ್ದಲ್ಲಿ ಅಂತರ್ಜಲ ವೃದ್ಧಿಸುತ್ತದೆ. ಅದಕ್ಕಾಗಿ ರೈತರೂ ಸಹಕರಿಸಬೇಕು ಎಂದು ಹೇಳಿದರು.
ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಕಾಕಚೊಕ್ಕಂಡಹಳ್ಳಿ ವೆಂಕಟೇಶ್, ಶಿವಣ್ಣ, ತಮ್ಮಣ್ಣ, ಶ್ರೀನಿವಾಸಗೌಡ, ಮುನಿರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.