ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪರವಾದ ಕಾರ್ಯಕ್ರಮಗಳು ಈ ಬಾರಿಯ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಗಂಗಾದೇವಿ ದೇವಾಲಯದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿ, ಜಂಗಮಕೋಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ಪಿ.ನಿರ್ಮಲಾಮುನಿರಾಜು ಹಾಗೂ ಮೇಲೂರು ತಾಲ್ಲೂಕು ಪಂಚಾಯತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಅವರ ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಜಂಗಮಕೋಟೆ ಜಿಲ್ಲಾ ಪಂಚಾಯತಿ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ದೆ ನಡೆಸುತ್ತಿರುವ ಅಭ್ಯರ್ಥಿ ಸ್ಥಳೀಯರಾಗಿದ್ದು, ವಿರೋಧ ಪಕ್ಷದವರು, ಕೇವಲ ಸ್ವಾರ್ಥಕ್ಕಾಗಿ ಕ್ಷೇತ್ರದ ಹೊರಗಿನಿಂದ ಅಭ್ಯರ್ಥಿಯನ್ನು ಸ್ಪರ್ದೆಗೆ ನಿಲ್ಲಿಸಿದ್ದಾರೆಯೆ ಹೊರತು, ಈ ಭಾಗದ ಅಭಿವೃದ್ಧಿಗಾಗಿ ಅಲ್ಲ. ಆದ್ದರಿಂದ ಈ ಭಾಗದ ಮತದಾರರು ಸ್ಥಳೀಯರನ್ನು ಬೆಂಬಲಿಸಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು.
ರಾಜ್ಯದಲ್ಲಿನ ಸರ್ಕಾರ, ಬಡವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಸರ್ಕಾರದ ಎಲ್ಲಾ ಯೋಜನೆಗಳು ನೇರವಾಗಿ ಬಡವರ ಮನೆಬಾಗಿಲಿಗೆ ತಲುಪಿಸುವಂತೆ ಮಾಡಲು ಆಡಳಿತ ಯಂತ್ರವನ್ನು ಸಜ್ಜುಗೊಳಿಸಲಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬ ಬಡವರು ನೆಮ್ಮದಿಯಿಂದ ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ರಚನೆ ಮಾಡಲಾದ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳು ಇಂದು ಹೆಚ್ಚು ಸಬಲರಾಗುತ್ತಿದ್ದಾರೆ. ಇಂತಹ ಅನೇಕ ಯೋಜನೆಗಳ ಮೂಲಕ ಸಾಮಾನ್ಯ ಜನರೂ ಕೂಡಾ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತಿದ್ದು, ಈ ಎಲ್ಲಾ ಸರ್ಕಾರದ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡಿರುವ ಜನರು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದರು.
ಅಭ್ಯರ್ಥಿಗಳಾದ ಪಿ.ನಿರ್ಮಲಾಮುನಿರಾಜು, ಗಂಗನಹಳ್ಳಿ ಶಿವಾನಂದ, ಮಾಜಿ ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ರಾಮಕೃಷ್ಣಪ್ಪ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸುಬ್ರಮಣಿ, ಬಿ.ಸಿ.ವೆಂಕಟೇಶಪ್ಪ, ಮುನಿಯಪ್ಪ, ಮುರಳಿ, ನಟರಾಜು, ಮಯೂರ, ಮಳ್ಳೂರು ನಾಗರಾಜ್, ಸಿ.ಎಂ.ಮುನಿಯಪ್ಪ, ಮುನಿರಾಜು, ಎಂ.ಎಂ.ಸ್ವಾಮಿ, ಮಳ್ಳೂರು ಗ್ರಾಮ ಪಂಚಾಯತಿ ಸದಸ್ಯ ರವಿಕುಮಾರ್, ಎಂ.ಡಿ.ಚಂದ್ರಪ್ಪ, ಗೋವಿಂದಪ್ಪ, ನಿಶಾಂತ್, ನಾರಾಯಣಸ್ವಾಮಿ, ಜೋಗಪ್ಪ, ಶ್ರೀನಿವಾಸ್, ರೆಡ್ಡಪ್ಪ, ವೆಂಕಟರಾಯಪ್ಪ, ಮುನೇಗೌಡ, ಗಿರೀಶ್, ನರಸಿಂಹಮೂರ್ತಿ, ಅಣ್ಣೆಪ್ಪ, ಎಂ.ರಾಮಪ್ಪ, ಜಿ.ವಿ.ಸುರೇಶ್, ವೆಂಕಟರಾಯಪ್ಪ, ಕರಗಪ್ಪ, ಜಿ.ಕೆ.ಶಿವಾನಂದ, ಮತ್ತಿತರರು ಹಾಜರಿದ್ದರು.