ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ನಗರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಗೆ ಭಾನುವಾರ ಭೇಟಿ ನೀಡಿದ್ದರು.
ರೀಲರುಗಳು ಹಾಗೂ ರೈತರ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಆಲಿಸಿದ ಸಿ.ಎಸ್.ಬಿ ಅಧ್ಯಕ್ಷರು ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಮಾರುಕಟ್ಟೆಯ ನಾನಾ ವಿಭಾಗಗಳಲ್ಲಿ ಸಂಚರಿಸಿದ ಅವರು, ರೇಷ್ಮೆ ಬೆಳೆಗಾರರನ್ನು ರೇಷ್ಮೆ ಗೂಡು ಉತ್ಪಾದನೆಗೆ ತೆಗಲುವ ವೆಚ್ಚ ಎಷ್ಟು, ನೂರು ಮೊಟ್ಟೆ ಹುಳು ಸಾಕಾಣಿಕೆ ಮಾಡಲು ಎಷ್ಟು ಖರ್ಚು ಬರುತ್ತಿದೆ, ಸರಾಸರಿ ಇಳುವರಿ ಎಷ್ಟು ಎಂಬುವ ವಿಚಾರದಲ್ಲಿ ಮಾಹಿತಿಯನ್ನು ಸಂಗ್ರಹಿಸಿದರು.
ಮಂಡಳಿ ಅಧ್ಯಕ್ಷರು ಆಗಮಿಸಿದ ವಿಚಾರ ತಿಳಿದು ರೈತ ಸಂಘದ ಮುಖಂಡರು, ರೀಲರುಗಳು ಹಾಗೂ ಬಿಜೆಪಿ ಮುಖಂಡರು ಸ್ಥಳಕ್ಕಾಗಮಿಸಿ ಮಾರುಕಟ್ಟೆಯಲ್ಲಿ ಆರಂಭಿಸಿರುವ ಇ-ಹರಾಜು ಪ್ರಕ್ರಿಯೆ, ಜಾಲರಿಗಳ ವಿತರಣೆ, ರೇಷ್ಮೆಕೃಷಿ, ರೇಷ್ಮೆ ಉದ್ದಿಮೆ, ಜಿ ಎಸ್ ಟಿ ಸುಂಕಕ್ಕೆ ಸಂಬಂಧಿಸಿದ ನಾನಾ ಸಮಸ್ಯೆಗಳನ್ನು ಹೇಳಿಕೊಂಡರು.
ಜತೆಗೆ ಖಾಸಗಿ ಚಾಕಿ ಸಾಕಾಣಿಕೆ ಕೇಂದ್ರಗಳು ಲಂಗು ಲಗಾಮು ಇಲ್ಲದೆ ರೇಷ್ಮೆ ಬೆಳೆಗಾರರನ್ನು ಶೋಷಿಸುತ್ತಿರುವ ಕುರಿತು ಪ್ತಸ್ತಾಪಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರಲ್ಲದೆ ರೇಷ್ಮೆನೂಲು ಹಾಗೂ ಉಪ ಉತ್ಪನ್ನಗಳನ್ನು ಜಿ ಎಸ್ ಟಿ ವ್ಯಾಪ್ತಿಯಿಂದ ಹೊರಗಿಡುವಂತೆ ಕೋರಿದರು.
ರೀಲರ್ಗಳ ಮಾನಸಿಕ ಹಿಂಸೆಗೆ ಕಾರಣವಾಗಿರುವ ಇ-ಹರಾಜು ಪದ್ದತಿಯನ್ನು ಕೂಡಲೇ ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕೆಲ ರೀಲರುಗಳು ಕೋರಿದರೆ, ಮಾರುಕಟ್ಟೆಯಲ್ಲಿ ಜಾತಿವಾರು ಜಾಲರಿಗಳನ್ನು ಹಂಚಿಕೆ ಮಾಡುತ್ತಿದ್ದು ಕೂಡಲೇ ಕ್ರಮ ಜರುಗಿಸಬೇಕೆಂದು ಕೆಲ ರೈತರು ಒತ್ತಾಯಿಸಿದರು.
ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮತ್ತು ಬೆಳೆಗಾರರ ಸಮಸ್ಯೆಗಳನ್ನು ಗುರುತಿಸಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಲಾಗುವುದೆಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರು ಭರವಸೆ ನೀಡಿದರು.
ಕೇಂದ್ರ ರೇಷ್ಮೆ ಮಂಡಳಿ ಸದಸ್ಯರಾದ ಯಲುವಳ್ಳಿ ರಮೇಶ್, ಮೇಲೂರು ರಾಮಕೃಷ್ಣಪ್ಪ, ಮಳ್ಳೂರು ಶಿವಣ್ಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ದಾಮೋದರ್, ರೈತ ಸಂಘದ ರವಿಕುಮಾರ್, ನರಸಿಂಹಮೂರ್ತಿ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.