ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾನೂನು ಹಾಗೂ ಪೌರತ್ವ ನೋಂದಣಿ ಪ್ರಕ್ರಿಯೆಯ ವಿರುದ್ಧ ಶನಿವಾರ ತಾಲ್ಲೂಕು ಮುಸ್ಲೀಂ ಫೋರಂ ಘಟಕ ಸೇರಿದಂತೆ ವಿವಿಧ ಸಂಘಟನೆಯ ಸದಸ್ಯರು ನಗರದ ಕಂದಾಯ ಭವನದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.
ಕೇಂದ್ರ ಸರ್ಕಾರ ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಮುಂದಾಗಿದೆ. ಒಂದು ದೇಶ ಒಂದು ಕಾನೂನು ಎನ್ನುತ್ತಲೇ ಸರ್ಕಾರ ಎರಡು ಕಾನೂನು ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರದ ಈ ತಿದ್ದುಪಡಿ ದೇಶದ ನೈತಿಕ, ಸಾಂವಿಧಾನಿಕ ಹಾಗೂ ಜಾತ್ಯಾತೀತ ಪರಂಪರೆಗೆ ವಿರುದ್ಧವಾಗಿದೆ. ಪೌರತ್ವ ಮಸೂದೆ ಧಾರ್ಮಿಕ ನೆಲೆಯ ತಾರತಮ್ಯವಾಗಿದ್ದು, ನಮ್ಮ ಸಂವಿಧಾನ ಪರಿಚ್ಛೇದ 14 ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮುಸ್ಲೀಂ ಮುಖಂಡರು ಆರೋಪಿಸಿದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಕಳೆದ 2014 ರ ಲೋಕಸಭೆ ಚುನಾವಣೆಯಲ್ಲಿ ದೇಶದ ಜನತೆಗೆ ಸುಳ್ಳು ಭರವಸೆಗಳು ನೀಡುವ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಿಂದ ಇದೀಗ ದೇಶದಲ್ಲಿ ಶಾಂತಿ ಕದಡುವ ಸ್ಥಿತಿ ನಿಮಾಣವಾಗಿದೆ ಎಂದರು.
ಯುವಕರಿಗೆ ಉದ್ಯೋಗಸೃಷ್ಟಿ, ವಿದೇಶದಲ್ಲಿರುವ ಕಪ್ಪುಹಣ ತರುವುದು ಸೇರಿದಂತೆ ದೇಶದ ಆರ್ಥಿಕ ಸ್ಥಿತಿ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದ ಯಾವುದೇ ಭರವಸೆಗಳು ಈಡೇರಲಿಲ್ಲ. ಬದಲಿಗೆ ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಕೇಂದ್ರ ಸರ್ಕಾರ ಸಹ ಪೌರತ್ವ ತಿದ್ದುಪಡಿ ಮಸೂದೆ ಮತ್ತು ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ಕೈಬಿಡುವವರೆಗೂ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಲು ಮುಂದಾಗಬೇಕು ಎಂದರು.
ಜಾಮಿಯಾ ಮಸೀದಿ ಸಮಿತಿ ಅಧ್ಯಕ್ಷ ತಾಜ್‌ಪಾಷ, ಕಾರ್ಯದರ್ಶಿ ಹೈದರ್‌ವಲಿ, ಮದೀನ ಮಸೀದಿಯ ನಿಸಾರ್, ಅಜೀಜ್‌ಸಾಬ್, ಅಮೀರಿಯಾ ಮಸೀದಿಯ ಬಾಬಾಜಾನ್, ದಸಂಸ ಸಂಚಾಲಕರಾದ ಎನ್.ಎ.ವೆಂಕಟೇಶ್, ಟಿ.ವಿ.ಚಲಪತಿ, ಯೂನಿಟಿ ಸಿಲ್‌ಸಿಲಾ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಸದ್, ಮೈನಾರಿಟಿ ಸೆಲ್ ಅಧ್ಯಕ್ಷ ಅಂಜದ್, ಸೈದು ಹಾಜೀಸಾಬ್, ಕಬೀರ್ ಅಹಮ್ಮದ್, ಟಿಪ್ಪು ಮೌಲ ಹಾಜರಿದ್ದರು.