Home News ಕೊತ್ತನೂರಿನಲ್ಲಿ ಜೋಡಿ ಆಮೆಗಳ ರಕ್ಷಣೆ

ಕೊತ್ತನೂರಿನಲ್ಲಿ ಜೋಡಿ ಆಮೆಗಳ ರಕ್ಷಣೆ

0

ತಾಲ್ಲೂಕಿನ ಕೊತ್ತನೂರಿನ ಹಾಳು ಬಾವಿಯಲ್ಲಿ ಬಿದ್ದಿದ್ದ ಎರಡು ಆಮೆಗಳನ್ನು ಮಂಗಳವಾರ ಸ್ನೇಕ್ ನಾಗರಾಜ್ ರಕ್ಷಿಸಿ ಕೆರೆಗೆ ಬಿಟ್ಟಿದ್ದಾರೆ.
ಕೊತ್ತನೂರಿನ ಶೆಟ್ಟಪ್ಪನವರ ವೆಂಕಟರೆಡ್ಡಿಯವರ ಹಾಳು ಬಾವಿಯಲ್ಲಿ ಕೊಳವೆ ಬಾವಿಯನ್ನು ಕೊರೆಸಿದ್ದಾರೆ. ಅದರ ಮೋಟರ್ ರಿಪೇರಿಗಾಗಿ ಬಾವಿಗೆ ಇಳಿದಿದ್ದ ಸ್ನೇಕ್ ನಾಗರಾಜ್ ಅವರಿಗೆ ಎರಡು ಆಮೆಗಳು ಕಂಡು ಬಂದಿವೆ. ಆಹಾರವನ್ನು ಹುಡುಕುತ್ತಾ ಬಂದು ಬಿದ್ದಿರಬಹುದಾದ ಆ ಎರಡು ಆಮೆಗಳನ್ನು ಅವರು ಅಲ್ಲಿಂದ ರಕ್ಷಿಸಿ ಹತ್ತಿರದ ಕೆರೆಗೆ ಬಿಟ್ಟಿದ್ದಾರೆ.

ಸ್ನೇಕ್ ನಾಗರಾಜ್ ರಕ್ಷಿಸಿದ ಆಮೆಗಳು

ಇಂಡಿಯನ್ ಬ್ಲಾಕ್ ಟರ್ಟಲ್ ಎಂದು ಇಂಗ್ಲಿಷ್ನಲ್ಲಿ ಕರೆಯುವ ಈ ಆಮೆಯು ಕೆರೆ, ಕುಂಟೆ, ನದಿ ಮುಂತಾದ ಸಿಹಿ ನೀರಿನ ಆಶ್ರಿತವಾಗಿ ಜೀವಿಸುತ್ತದೆ. ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಬರ್ಮಾ ಮುಂತಾದ ದೇಶಗಳಲ್ಲಿಯೂ ಇವುಗಳು ಕಾಣಸಿಗುತ್ತವೆ. ಗಾಢ ಕಂದು ಅಥವಾ ಕಪ್ಪು ಬಣ್ಣದ ಚಿಪ್ಪಿನ ಮೇಲೆ ಸಣ್ಣ ಹಳದಿ ಗೆರೆಗಳಿರುತ್ತವೆ. ಮುಂಜಾನೆ ಮತ್ತು ಸಂಜೆ ವೇಳೆಯಲ್ಲಿ ಚುರುಕಾಗಿರುವ ಇವು ಬಿಸಿಲು ಕಾಯಿಸಿಕೊಳ್ಳಲು ಬಂಡೆಗಳನ್ನು ಆಶ್ರಯಿಸುತ್ತವೆ. ಸಾಮಾನ್ಯವಾಗಿ ಹಗಲಿನಲ್ಲಿ ತಾವೇ ತೋಡಿಕೊಂಡ ರಂಧ್ರಗಳಲ್ಲಿ ಸೇರಿಕೊಂಡಿರುತ್ತವೆ.
‘ಆಹಾರವನ್ನು ಅರಸಿ ಆಮೆಗಳು ಕತ್ತಲಾದಾಗ ಅಲ್ಲಲ್ಲಿ ಅಲೆಯುತ್ತವೆ. ಹಾಗೆಯೇ ಹಾಳು ಬಾವಿಯಲ್ಲಿ ಬಿದ್ದಿರಬೇಕು. ನೀರಿದ್ದರೆ ಅವುಗಳಿಗೆ ಆಹಾರ ಸಿಕ್ಕಿ ಅವು ಬದುಕುತ್ತವೆ, ಇಲ್ಲದಿದ್ದರೆ ಸಾಯುತ್ತವೆ. ಅದಕ್ಕಾಗಿ ಅವನ್ನು ರಕ್ಷಿಸಿ ಹತ್ತಿರದ ಕೆರೆಯಲ್ಲಿ ಬಿಟ್ಟೆ’ ಎಂದು ಸ್ನೇಕ್ ನಾಗರಾಜ್ ತಿಳಿಸಿದರು.

error: Content is protected !!