ಮಡಿವಾಳ ಸಮಾಜದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ರಾಜ್ಯ ಸಹಕಾರಿ ಮಹಾ ಮಂಡಳಿಯ ಉಪಾಧ್ಯಕ್ಷ ಎಚ್.ವಿ.ನಾಗರಾಜ್ ಹೇಳಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಮಡಿವಾಳ ಮಾಚಿದೇವರ ವಿಗ್ರಹ ಪ್ರತಿಷ್ಠಾಪನೆ ಹಾಗೂ ಸಮುದಾಯದ ಮಹಿಳೆಯರಿಗಾಗಿ ರಚಿಸಲಾಗಿರುವ ಮಡಿವಾಳ ಮಾಚಿದೇವ ಮಹಿಳಾ ಸ್ವ ಸಹಾಯ ಸಂಘಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ರಾಜ್ಯಾದ್ಯಂತ ಇರುವ ಮಡಿವಾಳ ಸಮುದಾಯವನ್ನು ಎಸ್ ಸಿ ಗೆ ಸೇರಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹೋರಾಟಗಳು ನಡೆಯುತ್ತಿದ್ದು ಸಮುದಾಯದವರೆಲ್ಲಾ ಒಗ್ಗಟ್ಟಾಗಿ ಹೋರಾಟಗಳಲ್ಲಿ ಪಾಲ್ಗೊಂಡಾಗ ಮಾತ್ರ ಸಮುದಾಯದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಈಗಾಗಲೇ ಸಮುದಾಯದ ಮಹಿಳೆಯರು ರಚಿಸಿಕೊಂಡಿರುವ ಸ್ತ್ರೀ ಶಕ್ತಿ ಸಂಘಗಳ ಮೂಲಕ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಮಡಿವಾಳ ಮಾಚಿದೇವ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಮಾತನಾಡಿ, ಯಾವುದೇ ಗ್ರಾಮದಲ್ಲಿ ಮೂವತ್ತಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದಲ್ಲಿ ಆ ಗ್ರಾಮದಲ್ಲಿ ಸರ್ಕಾರದಿಂದ ಸಮುದಾಯ ಭವನ ನಿರ್ಮಾಣ ಮಾಡಲು ಅವಕಾಶವಿರುತ್ತದೆ. ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಈ ಬಗ್ಗೆ ಮಾತನಾಡಿ ಎಲ್ಲಿ ಅಗತ್ಯವಿದೆಯೋ ಅಲ್ಲಿ ಸಮುದಾಯ ಭವನ ನಿರ್ಮಿಸಲು ಕ್ರಮ ಜರುಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ. ಗ್ರಾಮದ ಹಿರಿಯ ಮುಖಂಡ ದೇವರಾಜ ಅರಸ್, ಮಡಿವಾಳ ಮಾಚಿದೇವ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ವಿ.ರಾಜಣ್ಣ, ಜಿಲ್ಲಾ ಕಾರ್ಯದರ್ಶಿ ವೆಂಕಟರಾಮಯ್ಯ, ಚೀಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ.ರಾಜಪ್ಪ, ಡಿ.ಕೃಷ್ಣಪ್ಪ, ಮುನಿರಾಜು, ದೇವರಾಜು ಹಾಜರಿದ್ದರು.