Home News ಕೊರೊನಾ ಭೀತಿಯ ನಡುವೆ ರೇಷ್ಮೆ ಗೂಡಿನ ಮಾರುಕಟ್ಟೆ ಪ್ರಾರಂಭ

ಕೊರೊನಾ ಭೀತಿಯ ನಡುವೆ ರೇಷ್ಮೆ ಗೂಡಿನ ಮಾರುಕಟ್ಟೆ ಪ್ರಾರಂಭ

0

ರೆಡ್ ಜೋನ್ ಎಂದು ಚಿಕ್ಕಬಳ್ಳಾಪುರ ಜಿಲ್ಲೆ ಘೋಷಣೆಯಾಗಿದ್ದರೂ ಜನರು ಹೆಚ್ಚಾಗಿ ಸೇರುವ ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ವಹಿವಾಟನ್ನು ಗುರುವಾರ ಸರ್ಕಾರದ ಆದೇಶದ ಮೇರೆಗೆ ಪ್ರಾರಂಭಿಸಲಾಯಿತು. ಒಟ್ಟು 185 ಲಾಟ್ ಅಂದರೆ ಸುಮಾರು 11 ರಿಂದ 12 ಟನ್ ರೇಷ್ಮೆ ಗೂಡನ್ನು ವಿವಿಧ ಭಾಗಗಳಿಂದ ರೈತರು ತಂದಿದ್ದರು.
ಕೆಲವು ರೀಲರುಗಳು ಕೊರೊನಾ ಭೀತಿಯಿಂದ, “ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಮುಚ್ಚಿ, ಸಾವಿರಾರು ಮಂದಿ ಸೇರಿದರೆ ರೋಗ ಹರಡಲು ಸಹಾಯ ಮಾಡಿದಂತಾಗುತ್ತದೆ. ಹರಾಜು ಪ್ರಕ್ರಿಯೆಯಲ್ಲಿ ನಾವು ಭಾಗಿಯಾಗುವುದಿಲ್ಲ” ಎಂದು ಹೊರಗುಳಿದರೆ, ಕೆಲವರು ನಮಗೆ ರೇಷ್ಮೆ ಗೂಡು ಬೇಕು, ನಾವು ಖರೀದಿಸುತ್ತೇವೆ ಎನ್ನುತ್ತಾ ಹರಾಜಿನಲ್ಲಿ ಭಾಗವಹಿಸಿದರು.
“ಪ್ರತಿನಿತ್ಯ ಸಾವಿರಾರು ಜನರು ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಒಟ್ಟಿಗೆ ಸೇರುವ ಅವಕಾಶವಿರುವುದರಿಂದ ಜನರಲ್ಲಿ ಸೋಂಕು ಹರಡುವ ಆತಂಕವಿದೆ. ಈಗಾಗಲೇ ಹೆಚ್ಚು ಸೋಂಕಿತರನ್ನು ಹೊಂದಿರುವ ಗೌರಿಬಿದನೂರು ಹಾಗೂ ಆಂಧ್ರದ ಹಿಂದೂಪುರದಿಂದ ಅಧಿಕ ರೇಷ್ಮೆ ಗೂಡು ಈ ದಿನ ರೈತರು ತಂದಿದ್ದಾರೆ. ಮಾರುಕಟ್ಟೆಯಲ್ಲಿ ನೀರಿನ ಅಭಾವವಿದೆ. ಶುಚಿತ್ವದ ಕೊರತೆಯಿದೆ. ಸೋಂಕು ಹರಡುವ ಭೀತಿ ನಮ್ಮದು.
ಇಲ್ಲಿಯವರೆಗೂ ಯಾವುದೇ ಕೊರೋನ ಸೋಂಕು ಶಂಕಿತರಿಲ್ಲದೆ ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದ ಶಿಡ್ಲಘಟ್ಟ ತಾಲ್ಲೂಕು, ಅಧಿಕಾರಿಗಳ ಈ ನಿರ್ಣಯದಿಂದ ಅಪಾಯದ ಸ್ಥಿತಿ ತಲುಪುವ ಸಂಭವವಿದೆ. ಶಿಡ್ಲಘಟ್ಟದಲ್ಲಿ ಸೋಂಕು ಹರಡಿದರೆ ಅದಕ್ಕೆ ಸರ್ಕಾರವೇ ನೇರ ಹೊಣೆ” ಎಂದು ರಾಜ್ಯ ರೀಲರುಗಳ ಸಂಘದ ಉಪಾಧ್ಯಕ್ಷ ರಾಮಕೃಷ್ಣಪ್ಪ ದೂರಿದರು.
ರೇಷ್ಮೆ ಗೂಡಿನ ಮಾರುಕಟ್ಟೆ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ ಮಾತನಾಡಿ, “ಸರ್ಕಾರದ ಆದೇಶದ ಮೇರೆಗೆ ನಾವು ಈ ದಿನ ರೇಷ್ಮೆ ಗೂಡಿನ ವಹಿವಾಟನ್ನು ನಡೆಸಿದ್ದೇವೆ. ಮುಂಜಾಗ್ರತೆ ಕ್ರಮಗಳಾಗಿ ಎಲ್ಲರಿಗೂ ಮಾಸ್ಕ್ ಧರಿಸಿ ಬರಬೇಕು ಎಂದು ತಿಳಿಹೇಳಿದ್ದೇವೆ. ಗುರುತಿನ ಚೀಟಿ ಇದ್ದವರು ಮಾತ್ರ ಮಾರುಕಟ್ಟೆಯನ್ನು ಪ್ರವೇಶಿಸಬೇಕು. ಗೇಟನ್ನು ಪ್ರವೇಶಿಸುವಾಗ ಕೈಗಳನ್ನು ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸಿಕೊಂಡು ಬರಬೇಕು. ಒಂದೊಂದು ರೇಷ್ಮೆ ಗೂಡಿನ ಲಾಟಿಗೂ ಅಂತರವಿರುವಂತೆ ಒಂದು ಬಿಟ್ಟು ಒಂದು ಬಿನ್ ಹಂಚಿಕೆ ಮಾಡಿದ್ದೇವೆ. ಹರಾಜು ಕೂಗುವವರು ಸಹ ದೂರ ದೂರ ನಿಲ್ಲುವಂತೆ ಗುರುತುಗಳನ್ನು ಹಾಕಿದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಮಾರುಕಟ್ಟೆ ವಹಿವಾಟನ್ನು ನಡೆಸಲು ಪ್ರಯತ್ನಿಸುತ್ತಿದ್ದೇವೆ” ಎಂದರು
ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿ, “ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನೆರವಾಗುತ್ತಿದ್ದಾರೆ. ಪ್ರತಿಯೊಬ್ಬರನ್ನೂ ಪರೀಕ್ಷಿಸಿ ಒಳಗೆ ಬಿಡಬೇಕೆಂದು ಸೂಚಿಸಿದ್ದೇವೆ” ಎಂದು ಹೇಳಿದರು.

error: Content is protected !!