ವಿಶ್ವ ಹಾಲು ದಿನಾಚರಣೆ ಹಾಗೂ ಎಂ.ವಿ.ಕೃಷ್ಣಪ್ಪ ಅವರ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋಚಿಮುಲ್ ವತಿಯಿಂದ ಒಳರೋಗಿಗಳಿಗೆ ಹಾಲು ವಿತರಿಸಲಾಯಿತು.
ಉಪವ್ಯವಸ್ಥಾಪಕ ಡಾ.ಚಂದ್ರಶೇಖರ್ ಮಾತನಾಡಿ, “ಹಾಲು ಪೌಷ್ಟಿಕ ಆಹಾರವಾಗಿದ್ದು, ಸಾರ್ವಜನಿಕರಲ್ಲಿ ಹಾಗೂ ಮಕ್ಕಳಲ್ಲಿ ಹಾಲು ಸರ್ವೋತ್ತಮ ಆಹಾರ ಎನ್ನುವ ಬಗ್ಗೆ ಜನಜಾಗೃತಿ ಮೂಡಿಸಲು ಈ ಕಾರ್ಯ ನಡೆಸಲಾಗುತ್ತಿದೆ. ಹಾಲಿನಲ್ಲಿ ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಜೀವಸತ್ವಗಳು ಮಿಟಮಿನ್, ಪ್ರೋಟೀನ್ ಗಳಿವೆ. ಹಾಲು ವಿಟಮಿನ್ ‘ಡಿ’ಯಿಂದ ಶ್ರೀಮಂತವಾಗಿರುತ್ತದೆ. ಕ್ಯಾನ್ಸರ್ ಹತ್ತಿಕ್ಕುವ ಸಾಮರ್ಥ್ಯ ಹೊಂದಿರುವ ಸಂಗತಿಗಳಲ್ಲಿ ವಿಟಮಿನ್ ಡಿ ಸಹ ಒಂದು. ಹಾಲು ಒಕ್ಕೂಟದಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ವಿತರಿಸಿ ಜನಜಾಗೃತಿ ಮೂಡಿಸುವ ಮೂಲಕ ಈ ದಿನ ವಿಶ್ವ ಹಾಲು ದಿನವನ್ನು ಆಚರಿಸುತ್ತಿದ್ದೇವೆ” ಎಂದರು.
ಹಾಲನ್ನು ರೋಗಿಗಳಿಗೆ ವಿತರಿಸಿದ ಶಾಸಕ ವಿ.ಮುನಿಯಪ್ಪ, “ನಂದಿನಿ ಹಾಲು ಹಾಗು ಹಾಲಿನ ಉತ್ಪನ್ನಗಳನ್ನು ಜನರು ಹೆಚ್ಚಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಹಾಲು ಉತ್ಪಾದಕರು ಹಾಗೂ ಸಹಕಾರ ಸಂಘಗಳ ಉಳಿವಿಗಾಗಿ ಸಹಕರಿಸಬೇಕು” ಎಂದು ಹೇಳಿದರು.
ಹಾಪ್ ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ, ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್, ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಕೋಚಿಮುಲ್ ಶಿಬಿರ ಕಚೇರಿಯ ವಿಸ್ತರಣಾಧಿಕಾರಿಗಳಾದ ಉಮೇಶ್ ರೆಡ್ಡಿ, ಶ್ರೀನಿವಾಸ್, ಅಧಿಕಾರಿಗಳಾದ ನರಸಿಂಹಯ್ಯ, ಕುಮ್ಮಣ್ಣ, ರಾಮ್ ದಾಸ್, ಸಂತೋಷ್, ಶಂಕರ್, ವೈದ್ಯರಾದ ಡಾ.ತಿಮ್ಮೇಗೌಡ, ಡಾ.ನಾಗರಾಜ್ ಹಾಜರಿದ್ದರು.