Home News ಕ್ರಿಮಿನಾಶಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ನಶಿಸುತ್ತಿದೆ

ಕ್ರಿಮಿನಾಶಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ನಶಿಸುತ್ತಿದೆ

0

ತೀವ್ರ ಬರಗಾಲಕ್ಕೆ ತುತ್ತಾಗಿರುವ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಬೆಳೆಗಳನ್ನು ಬೆಳೆಯಬೇಕಾದರೆ ಅನಿವಾರ್ಯವಾಗಿ ಕ್ರಿಮಿನಾಶಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗ ಮಾಡಬೇಕಾಗಿದ್ದು ಕ್ರಿಮಿನಾಶಕಗಳನ್ನು ಉಪಯೋಗಿಸುವಾಗ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹೇಳಿದರು.
ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಕೃಷಿ ಇಲಾಖೆಯಿಂದ ರೈತರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸುರಕ್ಷಿತ ಕೀಟನಾಶಕ ಬಳಕೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವ್ಯವಸಾಯ ಮಾಡಲು ಪ್ರತಿನಿತ್ಯ ಸಂಕಷ್ಟಗಳನ್ನು ಅನುಭವಿಸುತ್ತಿರುವ ಈ ಭಾಗದ ರೈತರು ಯಾವುದೇ ಬೆಳೆ ಬೆಳೆಯಬೇಕಾದರೆ ಕ್ರಿಮಿನಾಶಕಗಳ ಮೊರೆಹೋಗುವುದರಿಂದ ಭೂಮಿಯ ಮೇಲೆ ದುಷ್ಪರಿಣಾಮ ಬೀರುವುದರಿಂದ ಭೂಮಿಯ ಫಲವತ್ತತೆ ಕಳೆದುಕೊಳ್ಳುತ್ತಿದೆ. ಹಾಗಾಗಿ ರೈತರು ರಾಸಾಯನಿಕ ರಸಗೊಬ್ಬರಗಳನ್ನು ಉಪಯೋಗ ಮಾಡುವುದಕ್ಕಿಂತ ಹೆಚ್ಚಾಗಿ ಸಾವಯವ ಕೃಷಿಯತ್ತ ಗಮನಹರಿಸುವುದು ಸೂಕ್ತ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೇವೆಗೌಡ ಮಾತನಾಡಿ, ರೈತರು ಕ್ರಿಮಿನಾಶಕಗಳನ್ನು ಹೆಚ್ಚಾಗಿ ಬಳಕೆ ಮಾಡುವುದಕ್ಕಿಂತ ಸರ್ಕಾರದಿಂದ ಆಯೋಜನೆ ಮಾಡುವಂತಹ ತರಬೇತಿಗಳಲ್ಲಿ ಭಾಗವಹಿಸಿ ತಜ್ಞರಿಂದ ಸೂಕ್ತ ಸಲಹೆ ಸೂಚನೆಗಳನ್ನು ಪಡೆದುಕೊಂಡು ಗುಣಮಟ್ಟದ ಇಳುವರಿಯ ಬೆಳೆ ಬೆಳೆಯಬೇಕು. ಇಲಾಖೆಯ ಮುಖಾಂತರ ಸಿಗುವಂತಹ ಎಲ್ಲಾ ಸವಲತ್ತುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ತಾದೂರು ಮಂಜುನಾಥ್, ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ, ಬೋದಗೂರು ವೆಂಕಟಸ್ವಾಮಿರೆಡ್ಡಿ, ರಾಮಚಂದ್ರಪ್ಪ, ಶಿವಮೂರ್ತಿ, ಆನಂದ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.