Home News ಕ್ರಿಯಾಶೀಲ ಶಿಕ್ಷಕವೃಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆ ಹೆಚ್ಚಿಸಲಿ

ಕ್ರಿಯಾಶೀಲ ಶಿಕ್ಷಕವೃಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆ ಹೆಚ್ಚಿಸಲಿ

0

ಸರ್ಕಾರಿ ಶಾಲೆಗಳಲ್ಲಿ ಓದಿ ಪ್ರಸಿದ್ಧರಾದ ಅನೇಕ ಪ್ರತಿಭಾವಂತರಿದ್ದಾರೆ. ಇಂದಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೂ ಸಾಧಕರಾಗಲು ಅಧ್ಯಾಪಕರು, ಪೋಷಕರು ಒಟ್ಟಾಗಿ ಸೇರಿ ಮಕ್ಕಳ ಅಧ್ಯಯನಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದು ಶಾಸಕ ಎಂ. ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಚೀಮಂಗಲದ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಎಲ್ಕೆಜಿ ಯುಕೆಜಿ ಮಕ್ಕಳಿಗೆ ‘ಮಕ್ಕಳ ಮನೆ’, ಆಡಲು ‘ಮಕ್ಕಳ ಕುಟೀರ’ ಹಾಗೂ ಶಿಕ್ಷಕ ಎಂ.ಜೆ.ರಾಜೀವ್ಗೌಡ ಅವರು ಮಕ್ಕಳ ಕಲಿಕೆಗಾಗಿ ಸಿದ್ಧಪಡಿಸಿರುವ ‘ಸಂಯೋಜಿತೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಹಲವಾರು ಮಂದಿ ದಾನಿಗಳು ಕೈಜೋಡಿಸುತ್ತಿದ್ದಾರೆ. ಅವರ ನೆರವಿನಿಂದ, ಕ್ರಿಯಾಶೀಲ ಶಿಕ್ಷಕವೃಂದ ಹಾಗೂ ಪೋಷಕರ ಸಹಕಾರದಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು. ಖಾಸಗಿ ಶಾಲೆಗಳಿಗಿಂತ ಕಲಿಕೆಯಲ್ಲಿ ಸರ್ಕಾರಿ ಶಾಲಾ ಮಕ್ಕಳು ಮೇಲುಗೈ ಸಾಧಿಸಬೇಕು. ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಸದ್ಭಳಕೆ ಮಾಡಿಕೊಂಡು ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವಲ್ಲಿ ಶಿಕ್ಷಕರದ್ದು ಪ್ರಮುಖ ಪಾತ್ರವಿದೆ ಎಂದು ಹೇಳಿದರು.
ಶಾಲೆಯ ಆವರಣದಲ್ಲಿನ ‘ಮಕ್ಕಳಮನೆ’ಯನ್ನು ಶಾಸಕ ಎಂ.ರಾಜಣ್ಣ ಉದ್ಘಾಟಿಸಿದರೆ, ‘ಮಕ್ಕಳ ಕುಟೀರ’ವನ್ನು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ಉದ್ಘಾಟಿಸಿದರು. ತಾಲ್ಲೂಕು ಪಂಚಾಯತಿ ಅಧ್ಯಕ್ಷ ಎನ್.ಲಕ್ಷ್ಮೀನಾರಾಯಣರೆಡ್ಡಿ, ಮಕ್ಕಳ ಕಲಿಕೆಗಾಗಿ ಸಿದ್ಧಪಡಿಸಿರುವ ‘ಸಂಯೋಜಿತೆ’ ಪುಸ್ತಕ ಬಿಡುಗಡೆ ಮಾಡಿದರು. ಎಲ್ಕೆಜಿ ಯುಕೆಜಿ ಮಕ್ಕಳ ಆಟದ ಮನೆಗೆ ಬೇಕಾಗುವ ಆಟದ ಸಾಮಗ್ರಿಗಳನ್ನು ನಾರ್ಥ್ ಈಸ್ಟ್ ಸುರೇಶ್ ನೀಡಿದರು. ಹಳೆಯ ವಿದ್ಯಾರ್ಥಿಗಳ ಸಂಘದ ರಾಜಶೇಖರ್ ಮಕ್ಕಳಿಗೆ ಬ್ಯಾಗ್ಗಳನ್ನು ವಿತರಿಸಿದರು. ‘ಸಂಯೋಜಿತೆ’ ಪುಸ್ತಕ ಪರಿಚಯವನ್ನು ಕೇಂದ್ರ ಕಸಾಪ ತರಬೇತಿ ಸಂಚಾಲಕ ಕೆ.ರಾಜಕುಮಾರ್ ಮಾಡಿಕೊಟ್ಟರು.
ಶಿಕ್ಷಕ ಎಂ.ಜೆ ರಾಜೀವಗೌಡ ‘ಸಂಯೋಜಿತೆ’ ಪುಸ್ತಕದ ಕುರಿತಾಗಿ ಮಾತನಾಡಿ, ‘ಒಂಚೂರು ಆಟ, ಒಂಚೂರು ಗಣಿತ, ಒಂಚೂರು ಭಾಷೆ’ ಎಂಬ ಉದ್ದೇಶದಿಂದ ಪುಸ್ತಕವನ್ನು ರೂಪಿಸಲಾಗಿದೆ. ಇಂಡಿಯನ್ ಫೌಂಡೇಷನ್ ಫಾರ್ ದಿ ಆರ್ಟ್ಸ್(ಐಎಫ್ಎ) ಸಂಸ್ಥೆಯವರು ಈ ಪುಸ್ತಕವನ್ನು ಹೊರತರಲು ಒಂದು ಲಕ್ಷರೂಗಳನ್ನು ನೀಡಿದ್ದಾರೆ. ಐದು ನೂರು ಪುಸ್ತಕವನ್ನು ಮುದ್ರಣ ಮಾಡಿಸಿದ್ದು, ನಮ್ಮ ಶಾಲೆಯ 3,4,5 ಮತ್ತು 6 ನೇ ತರಗತಿಯ 150 ಮಕ್ಕಳು ಈ ಪ್ರಯೋಗಕ್ಕೆ ಒಳಪಡುತ್ತಾರೆ. ನಮ್ಮ ತಾಲ್ಲೂಕಿನ 6 ಶಾಲೆಗಳ ಶಿಕ್ಷಕರು ಈ ಪ್ರಯೋಗಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಕನ್ನಡ ಭಾಷೆಯ ಕಲಿಕೆಯನ್ನು ಗಟ್ಟಿಗೊಳಿಸುವುದರ ಮೂಲಕ ಗಣಿತ ಕಲಿಕೆಯನ್ನು ಸುಲಭಗೊಳಿಸುವ ಅಭ್ಯಾಸ ಪುಸ್ತಕವಿದು. ಗಣಿತದ ಮೂಲ ಪರಿಕಲ್ಪನೆಯನ್ನು ಅರ್ಥೈಸಲು ಅದಕ್ಕೆ ಸಂಬಂಧಿಸಿದ ಶಿಶುಗೀತೆಗಳು, ಜನಪದ ಹಾಡುಗಳು ಮತ್ತು ಮಕ್ಕಳ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಅನುಕ್ರಮ ಸಂಖ್ಯೆಗಳು, ಏರಿಕೆ ಇಳಿಕೆ, ಸ್ಥಾನ, ಸ್ಥಾನಬೆಲೆ, ದಶಮಾಂಶ ಹೀಗೆ ಕೆಲವೇ ಕೆಲವು ಗಣಿತದ ಪರಿಕಲ್ಪನೆಗಳನ್ನು ಮಾತ್ರ ಈ ಪುಸ್ತಕದ ಮೂಲಕ ಕಲಿಸಲು ಯತ್ನಿಸಲಾಗಿದೆ ಎಂದು ವಿವರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಮಂಜುನಾಥ, ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾ ರಘು, ತಾಲ್ಲೂಕು ಪಂಚಾಯತಿ ಸದಸ್ಯ ರಾಜಶೇಖರ್, ಗ್ರಾಮ ಪಂಚಾಯತಿ ಅಧ್ಯಕ್ಷೆ ನಳಿನಾ ಮಂಜುನಾಥ್, ಉಪಾಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ಮುಖ್ಯ ಶಿಕ್ಷಕರಾದ ಸಿ.ಎಂ.ಮುನಿರಾಜು, ಎಸ್.ಶಿವಶಂಕರ್, ಶ್ರೀರಾಮಯ್ಯ, ಬಿ.ಈಶ್ವರ್, ನಾರಾಯಣಮ್ಮ ರಾಮಪ್ಪ, ಗುರುರಾಜರಾವ್, ಸುರೇಶ್, ಸುಮಾ ಮಂಜುನಾಥ್, ಶಂಕರ್, ಪಾರ್ಥಸಾರಥಿ, ಅರಿಕೆರೆ ಮುನಿರಾಜು, ಬಸಪ್ಪ, ಸಿದ್ದಲಿಂಗಪ್ಪ, ನರಸಿಂಹಯ್ಯ, ರಮೇಶ್, ದೇವರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.