ಕ್ರೀಡೆಗಳಲ್ಲಿ ಭಾಗವಹಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ. ಪಠ್ಯತೇತರ ಚಟುವಟಿಕೆಗಳೂ ಮಕ್ಕಳಿಗೆ ಅತ್ಯಗತ್ಯ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಬುದ್ದಿಶಕ್ತಿಯ ಬೆಳವಣಿಗೆಯ ಜೊತೆಯಲ್ಲೆ ಮಾನಸಿಕವಾದ ತೊಡಕುಗಳು ದೂರವಾಗುತ್ತದೆ. ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಮಕ್ಕಳು ಕ್ರೀಡೆಗಳಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕಾರ ಮಾಡಬೇಕು. ಉತ್ತಮವಾದ ಕ್ರೀಡಾಪಟುಗಳಾಗಿ ರಾಜ್ಯ ಹಾಗೂ ದೇಶಕ್ಕೆ ಉತ್ತಮ ಕೀರ್ತಿ ತರಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ಮಕ್ಕಳಲ್ಲಿ ಇರುವಂತಹ ಉತ್ತಮವಾದ ಪ್ರತಿಭೆಗಳ ಜೊತೆಯಲ್ಲೆ ಕ್ರೀಡೆಗಳಲ್ಲಿ ಉತ್ತಮವಾದ ಸಾಧನೆ ಮಾಡುವಂತಹ ಎಲ್ಲಾ ಲಕ್ಷಣಗಳಿದ್ದರೂ ಕೂಡಾ ಕೆಲವು ಮಕ್ಕಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಅಂತಹ ಯಾವುದೇ ಮಕ್ಕಳಿಗೂ ಅವಕಾಶ ವಂಚಿತರಾಗಲು ಅವಕಾಶ ನೀಡದೆ, ಶಿಕ್ಷಕರು, ಪೋಷಕರು ಉತ್ತಮವಾದ ಬೆಂಬಲ ನೀಡಬೇಕು. ಕ್ರೀಡೆಗಳೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮವಾದ ಸಾಧನೆ ಮಾಡಲು ಇರುವಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರವೂ ಕೂಡಾ ಅನೇಕ ಸೌಲತ್ತುಗಳನ್ನು ಕಲ್ಪಿಸಿಕೊಡುತ್ತಿದ್ದು, ಮಕ್ಕಳು ಉಪಯೋಗಿಸಿಕೊಳ್ಳಬೇಕು ಎಂದರು.
ಶಿಕ್ಷಣ ಇಲಾಖೆಯ ಬಿ.ಆರ್.ಸಿ.ಕೇಂದ್ರದ ಸಮನ್ವಯಾಧಿಕಾರಿ ಜಿ.ಕೆ.ಸುಮಾ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಕೆ.ಗುರುರಾಜ್ರಾವ್, ವಿಜಯಕುಮಾರ್, ಬಿ.ವಿ.ಶ್ರೀರಾಮಯ್ಯ, ಬೈರಾರೆಡ್ಡಿ, ಡಾಲ್ಫಿನ್ ಶಾಲೆಯ ಅಧ್ಯಕ್ಷ ಎ.ನಾಗರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸಪ್ಪ, ಮುನಿರಾಜು, ಕೆ.ಬಿ.ಅರುಣ, ಎಲ್.ಅಶ್ವಥ್ಥನಾರಾಯಣ, ದ್ರಾಕ್ಷಾಯಿಣಿ, ರಾಮಚಂದ್ರಪ್ಪ, ಸುದರ್ಶನ್. ಮುನಿಯಪ್ಪ, ವೇಣುಮಾಧವಿ ಮತ್ತಿತರರು ಹಾಜರಿದ್ದರು.