Home News ಕ್ರೀಡೆಯಲ್ಲಿ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಅಗತ್ಯವಿದೆ

ಕ್ರೀಡೆಯಲ್ಲಿ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಅಗತ್ಯವಿದೆ

0

ಕ್ರೀಡೆಯ ಬಗ್ಗೆ ಇರುವ ಆಸಕ್ತಿಯಿಂದ ಮಕ್ಕಳಿಗೆ ತರಬೇತಿಯನ್ನು ನೀಡುತ್ತಾ ತಾಲ್ಲೂಕು ಮಟ್ಟದಲ್ಲಿ ಸ್ಪರ್ಧೆಯನ್ನು ಆಯೋಜಿಸಿ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸಲು ಮುಂದಾಗುತ್ತಿರುವುದು ಶ್ಲಾಘನೀಯ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯೆ ಪಂಕಜಾ ನಿರಂಜನ್ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ 16 ವರ್ಷದ ಒಳಗಿನ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಮಕ್ಕಳು ಕ್ರೀಡೆಯಲ್ಲಿ ಅಪಾರ ಪ್ರತಿಭಾವಂತರು. ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಅಗತ್ಯವಿದೆ. ಸರ್ಕಾರದ ಪ್ರೋತ್ಸಾಹದೊಂದಿಗೆ ಕ್ರೀಡಾಸಕ್ತರು ಆಗಾಗ್ಗೆ ತರಬೇತಿ ಶಿಬಿರಗಳನ್ನು ನಡೆಸುವ ಮೂಲಕ ಮಕ್ಕಳು ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ಪ್ರತಿನಿಧಿಸುವಂತೆ ಮಾಡಬೇಕು ಎಂದರು.

ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉದ್ದ ಜಿಗಿತ ಮತ್ತು ಚಕ್ರ ಎಸೆತದ ದೃಶ್ಯಗಳು.

ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕ್ರೀಡಾಸಕ್ತರು ಒಗ್ಗೂಡಿ ಕ್ರೀಡಾಂಗಣದ ಅಭಿವೃದ್ಧಿ ಮತ್ತು ಮಕ್ಕಳಿಗೆ ತರಬೇತಿ, ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟುಗಳು ತಾಲ್ಲೂಕಿನಿಂದ ಹೊರಹೊಮ್ಮಲಿದ್ದಾರೆ ಎಂದು ಹೇಳಿದರು.
100 ಮೀಟರ್, 200 ಮೀಟರ್, 400 ಮೀಟರ್ ಓಟ, ಗುಂಡು ಎಸೆತ, ಚಕ್ರ ಎಸೆತ, ಉದ್ದ ಜಿಗಿತ ಸ್ಪರ್ಧೆಗಳನ್ನು ಬಾಲಕ ಮತ್ತು ಬಾಲಕಿಯರಿಗೆ ನಡೆಸಲಾಯಿತು. ವಿಜೇತರಿಗೆ ಪ್ರಥಮ ಬಹುಮಾನ ೩೦೦ ರೂ ನಗದು, ದ್ವಿತೀಯ ಬಹುಮಾನ ೨೦೦ ರೂ, ತೃತೀಯ ಬಹುಮಾನ ೧೦೦ ರೂ ನಗದು ಹಾಗೂ ಎಲ್ಲರಿಗೂ ನಗದು ಹಣದೊಂದಿಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ರಾಜ್ಯಮಟ್ಟದ ಹಾಕಿ ತರಬೇತುದಾರ ಮುಸ್ಟಾಕ್, ನಗರಸಭೆ ಆಯುಕ್ತ ಛಲಪತಿ, ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿರಂಜನ್, ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಎಂ.ಮುನಿರಾಜು, ಅಧ್ಯಕ್ಷ ಎ.ಲಕ್ಷ್ಮೀಪತಿ, ಕಾರ್ಯದರ್ಶಿ ಕೆ.ಪುರುಷೋತ್ತಮ್, ಆರ್.ಸುರೇಶ್, ಶ್ರೀನಾಥ್, ನರೇಶ್, ಬಿಎಸ್.ರಘು, ದೈಹಿಕ ಶಿಕ್ಷಕರಾದ ಗಣೇಶ್, ಎನ್.ನೇತ್ರಾವತಿ, ವಿಠಲ್, ರಂಗನಾಥ್, ಅಗಜಾನನ ಮೂರ್ತಿ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ಹಾಜರಿದ್ದರು.