ತಾಲ್ಲೂಕಿನ ಚೀಮನಹಳ್ಳಿ ಗ್ರಾಮದ ವಿದ್ಯಾರ್ಥಿನಿ ಸಿ.ಎಚ್.ಚಿನ್ಮಯಿ ಅವರ ಮನೆಗೆ ಗುರುವಾರ ಭೇಟಿ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ವಿದ್ಯಾರ್ಥಿನಿಯನ್ನು ಅಭಿನಂದಿಸಿ ಮಾತನಾಡಿದರು.
೨೦೧೮-೧೯ ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೧೮ ಅಂಕ ಪಡೆಯುವ ಮೂಲಕ ತಾಲ್ಲೂಕಿಗೆ ಮೊದಲ ಸ್ಥಾನ ಪಡೆದಿರುವ ಬಿಜಿಎಸ್ ವಿದ್ಯಾಸಂಸ್ಥೆಯ ಸಿ.ಎಚ್.ಚಿನ್ಮಯಿ ಅವರ ಮುಂದಿನ ಜೀವನದ ಕನಸು ನನಸಾಗಲಿ ಎಂದು ಅವರು ಹಾರೈಸಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೋರ್ವಳು ೬೨೫ ಅಂಕಗಳಿಗೆ ೬೧೮ ಪಡೆದಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ. ವಿದ್ಯಾರ್ಥಿನಿಯ ಸಾಧನೆಗೆ ಪ್ರೇರೇಪಣೆ ನೀಡಿದ ಪೋಷಕರು ಹಾಗೂ ಶಿಕ್ಷಕರ ಶ್ರಮ ಶ್ಲಾಘನೀಯ. ಚಿನ್ಮಯಿಯ ವೈದ್ಯೆಯಾಗುವ ಕನಸು ನನಸಾಗಲಿ ಎಂದು ಹಾರೈಸಿದರು.
ವಿದ್ಯಾರ್ಥಿನಿ ಸಿ.ಎಚ್.ಚಿನ್ಮಯಿ ಮಾತನಾಡಿ, ನನ್ನ ಯಶಸ್ಸಿಗೆ ನನ್ನ ಪೋಷಕರೂ ಹಾಗೂ ಬಿಜಿಎಸ್ ವಿದ್ಯಾಸಂಸ್ಥೆಯ ಎಲ್ಲಾ ಶಿಕ್ಷಕರು ನೀಡಿದ ಪ್ರೋತ್ಸಾಹವೇ ಕಾರಣ. ಮುಂದಿನ ದಿನಗಳಲ್ಲಿ ವೈದ್ಯಕೀಯ ವಿಭಾಗದಲ್ಲಿ ವ್ಯಾಸಂಗ ಮಾಡಿ ಉತ್ತಮ ವೈದ್ಯೆಯಾಗುವ ಕನಸು ಹೊಂದಿದ್ದು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜಿಎಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಆರ್.ಮಹದೇವ್, ವಿದ್ಯಾರ್ಥಿನಿಯ ತಂದೆ ಹರಿಪ್ರಸಾದ್, ಬಿಜಿಎಸ್ ಸಂಸ್ಥೆಯ ಶಿಕ್ಷಕರು ಹಾಜರಿದ್ದರು.