Home News ಗಂಗಮ್ಮನ ತೊಡೆಯ ಮೇಲೆ ಭೂದೇವಿ

ಗಂಗಮ್ಮನ ತೊಡೆಯ ಮೇಲೆ ಭೂದೇವಿ

0

‘ಕೆರೆಗೆ ಮೊರವೆ(ಕೋಡಿ) ಬಹಳ ಮುಖ್ಯ. ಕೆರೆಯಲ್ಲಿ ಎಷ್ಟು ನೀರು ಇರಬೇಕು ಎನ್ನುವುದನ್ನು ತೀರ್ಮಾನಿಸುವುದೇ ಕೋಡಿ. ಕೋಡಿ ಹರಿಯುವ ಕಾಲುವೆ ಸರಿಯಿರದಿದ್ದರೆ, ಕೆರೆ ಕಟ್ಟೆ ಒಡೆದು ಹೋಗುತ್ತದೆ, ಇಲ್ಲದಿದ್ದರೆ, ಕೆರೆಯ ನೀರೆಲ್ಲಾ ಹರಿದು ಹೋಗುತ್ತದೆ’ ಎಂದು ಹಿರಿಯರು ಕೆರೆಯ ಕೋಡಿ ಮತ್ತು ಕಾಲುವೆಗಳ ಪ್ರಾಮುಖ್ಯತೆಯನ್ನು ವಿವರಿಸುತ್ತಾರೆ.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಹಲವಾರು ಕೆರೆ ಏರಿಯ ಮೇಲೆ ಕೆರೆಯನ್ನು ಹಾಗೂ ಅದರ ಕೋಡಿಯನ್ನು ಕಾಪಾಡಲೆಂದು ‘ದುಗ್ಗಲಮ್ಮ’ ಎಂದು ಕರೆಯುವ ದೇವತೆಯ ಶಿಲ್ಪಗಳು ಕಂಡುಬರುತ್ತವೆ. ಜೀವದಾಯಿನಿ ಕೆರೆಯನ್ನು ರಕ್ಷಿಸುವ ಅಪರೂಪದ ದೇವಿಯ ಶಿಲ್ಪವು ನಗರದ ಬಸ್ ನಿಲ್ದಾಣದ ಬಳಿಯ ಗೌಡನ ಕೆರೆಯ ಸೇತುವೆ ಮೇಲೂ ಇದೆ.

ಗೌಡನ ಕೆರೆಯ ಸೇತುವೆ ಮೇಲಿರುವ ಫಲಕ
ಗೌಡನ ಕೆರೆಯ ಸೇತುವೆ ಮೇಲಿರುವ ಫಲಕ
ಬೆಳ್ಳೂಟಿ ಕೆರೆಗೆ ಗೌಡನ ಕೆರೆಯಿಂದ ಹರಿದು ಹೋಗುವ ನೀರಿನ ಕಾಲುವೆಯ ಮೇಲೆ ಕಟ್ಟಿರುವ ಸೇತುವೆಯನ್ನು 1960, ಫೆಬ್ರುವರಿ 7 ರ ಭಾನುವಾರದಂದು ಚೀಫ್ ಎಂಜಿನಿಯರ್ ಕೆ.ಎಂ.ಜೋಶಿ ಉದ್ಘಾಟಿಸಿರುವುದಾಗಿ ಅದರ ಮೇಲಿನ ಫಲಕದ ಮೂಲಕ ತಿಳಿದುಬರುತ್ತದೆ. ಈ ಫಲಕದ ಪಕ್ಕದಲ್ಲೇ ಅಪರೂಪದ ದೇವಿಯ ಶಿಲ್ಪವಿದೆ. ತನ್ನ ಎಡ ತೊಡೆಯ ಮೇಲೆ ಹೆಣ್ಣು ಮಗುವೊಂದನ್ನು ಕೂರಿಸಿಕೊಂಡು ಪೀಠದ ಮೇಲೆ ಕುಳಿತ ಅಪರೂಪದ ‘ದುಗ್ಗಲಮ್ಮ’ ದೇವಿಯ ಈ ಶಿಲ್ಪ ಕೆರೆಯ ರಕ್ಷಣೆಯ ದೇವಿ ಸ್ವರೂಪದಲ್ಲಿದೆ.
ಸಾಮಾನ್ಯವಾಗಿ ಕೆರೆ ಕಟ್ಟೆ ಒಡೆಯದಿರಲಿ ಎಂದು ಕೆರೆಯ ಕಟ್ಟೆಗಳ ಮೇಲೆ ಅಮ್ಮನವರ ವಿಗ್ರಹ ಇಟ್ಟು ಪೂಜಿಸುವುದು ಹಿಂದಿನವರ ವಾಡಿಕೆ. ಈ ಶಿಲ್ಪದ ಲಕ್ಷಣವನ್ನು ನೋಡಿದಾಗ, ಅದು ಕೆರೆಯ ನಿರ್ಮಾಣ ಕಾಲದ್ದಿರಬಹುದು, ನಂತರ ಸೇತುವೆಯನ್ನು ನಿರ್ಮಿಸುವಾಗ ಅಲ್ಲಿಯೇ ಹತ್ತಿರದಲ್ಲಿದ್ದ ಅದನ್ನು ಸೇತುವೆಗೆ ಜೋಡಿಸಿರಬಹುದೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
ಗೌಡನ ಕೆರೆಯ ಅರ್ಧ ಶತಮಾನಕ್ಕೂ ಹಿಂದಿನ ಸೇತುವೆ
ದೇವಿಯ ಶಿಲ್ಪದ ಕೆತ್ತನೆಯಲ್ಲಿ ಶಿಲ್ಪಿಯು ಅಸಾಮಾನ್ಯ ಪ್ರತಿಭೆಯನ್ನು ತೋರಿಸಿರುವುದು ಇಲ್ಲಿ ಕಂಡುಬರುತ್ತದೆ. ದೇವಿಯು ದೇವಸ್ಥಾನದಲ್ಲಿರುವ ರೀತಿಯಲ್ಲಿ ಅಕ್ಕಪಕ್ಕ ಕಂಬಗಳನ್ನು ಕೆತ್ತಲಾಗಿದೆ. ದೇವಿಯ ಕಿವಿಯಲ್ಲಿನ ಬುಲಾಕು(ಜುಮುಕಿ), ಕಾಲಿಗೆ ಅಂದಿಗೆ, ಕೈಯಲ್ಲಿನ ಕಡಗ, ಕುತ್ತಿಗೆಯ ಸರ, ಸೀರೆಯನ್ನು ಉಟ್ಟಿರುವ ರೀತಿ, ಸೊಂಟದ ಬಳಿ ಸೀರೆಯನ್ನು ಬಾಳೆಕಾಯಿಯಂತೆ ಸುತ್ತಿ ಕಟ್ಟಿರುವುದು ಮುಂತಾದವನ್ನು ಬಹು ಸೂಕ್ಷ್ಮವಾಗಿ ಕೆತ್ತಲಾಗಿದೆ. ಹೆಣ್ಣು ಮಗುವನ್ನು ತನ್ನ ಎಡ ತೊಡೆಯ ಮೇಲೆ ಕೂರಿಸಿಕೊಂಡಿರುವುದನ್ನು ನೋಡಿದಾಗ ಸಾಕ್ಷಾತ್ ಗಂಗಮ್ಮನೇ ಭೂದೇವಿಯನ್ನು ಲಾಲಿಸಿ ಪಾಲಿಸುವ ರೀತಿಯಲ್ಲಿದೆ. ಜಲದೇವತೆಯಾದ ಗಂಗಮ್ಮನು ಭೂಮಿತಾಯಿಯನ್ನು ಪಾಲಿಸಿದಾಗ ಮಾತ್ರ ಭೂತಾಯಿಯ ಮಕ್ಕಳಾದ ನಾವು ಸುರಕ್ಷಿತವಾಗಿ, ಸಂರಕ್ಷಿತವಾಗಿ, ಬೆಳೆ ಬೆಳೆದು ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬ ನಮ್ಮ ಜನಪದರ ಆಶಯವನ್ನು ಈ ದೇವಿಯ ಶಿಲ್ಪದಲ್ಲಿ ಕಾಣಬಹುದು.
‘ನಾವ್ ಸಣ್ಣೋರಿದ್ವಿ. ಆಗ ಗೌಡನ ಕೆರೆ ತುಂಬಿ ಮೊರವೆ(ಕೋಡಿ) ಹೋಗ್ತಿತ್ತು. ಒಂದು ಅಡಿ ಎತ್ತರಕ್ಕೆ ಹರಿದರೆ ಅಮ್ಮನ ಕೆರೆಗೆ ನೀರು ಹೋಗ್ತಿತ್ತು, ಎರಡೂವರೆ ಅಡಿಗೂ ಜಾಸ್ತಿಯಾದ್ರೆ ಬೆಳ್ಳೂಟಿ ಕೆರೆಗೆ ಹೋಗ್ತಿತ್ತು’ ಎಂದು ಹಳಬರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ.
‘ಸುಮಾರು 55 ವರ್ಷಗಳ ಹಿಂದಿನ ಸೇತುವೆಯು ಗತನೆನಪುಗಳನ್ನು ಸಾರುವುದರೊಂದಿಗೆ ಅಪರೂಪದ ಶಿಲ್ಪವೊಂದನ್ನು ಇಲ್ಲಿ ತನ್ನೊಡಲಲ್ಲಿರಿಸಿಕೊಂಡಿದೆ. ಗೌಡನ ಕೆರೆಯು ಈಗ ನಗರದ ತ್ಯಾಜ್ಯಗಳನ್ನು ಸುರಿಯುವ ಗುಂಡಿಯಾಗಿದ್ದು, ಆಗಿನ ಕೋಡಿ, ತೂಬು, ಕೆರೆಯಿಂದ ಕೆರೆಗೆ ನೀರು ಹರಿಯುವ ಸಂಗತಿಗಳೆಲ್ಲಾ ಈಗಿನವರಿಗೆ ಅಪ್ರಸ್ತುತವಾಗಿದೆ. ಶಿಡ್ಲಘಟ್ಟಕ್ಕೆ ಪ್ರವೇಶಿಸುತ್ತಿದ್ದಂತೆ ಕಾಣುವ ಗೌಡನ ಕೆರೆಯನ್ನು ತ್ಯಾಜ್ಯದಿಂದ ಮುಕ್ತಿಗೊಳಿಸಿದಲ್ಲಿ ಅದರ ಸೌಂದರ್ಯ ಮರುಕಳಿಸುತ್ತದೆ. ಊರಿಗೂ ಇದೊಂದು ಲಕ್ಷಣವಾಗುತ್ತದೆ. ಅಂತರ್ಜಲವೂ ಇದರಿಂದ ಹೆಚ್ಚಲಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’ ಎನ್ನುತ್ತಾರೆ ಹಿರಿಯರಾದ ಎಸ್.ವಿ.ಅಯ್ಯರ್.
–ಡಿ.ಜಿ.ಮಲ್ಲಿಕಾರ್ಜುನ