ಗಂಗಾಕಲ್ಯಾಣ ಯೋಜನೆಯಡಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಪ್ರವಾಸಿಮಂದಿರದ ಆವರಣದಲ್ಲಿ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಗಂಗಾ ಕಲ್ಯಾಣ ಯೋಜನೆಯಡಿ ಈಗಾಗಲೇ ಕೊಳವೆ ಬಾವಿ ಕೊರೆಸಿರುವ ೪೧ ಮಂದಿ ಫಲಾನುಭವಿಗಳಿಗೆ ಪಂಪು, ಮೋಟಾರ್, ಕೇಬಲ್ ಸೇರಿದಂತೆ ವಿವಿಧ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.
ತೀವ್ರ ಮಳೆಯ ಕೊರತೆಯನ್ನು ಅನುಭವಿಸುತ್ತಿರುವ ಬಯಲುಸೀಮೆ ಭಾಗದ ಜನರು ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿರುವ ಪರಿಸ್ಥಿತಿಯಲ್ಲಿ ಪರಿಶಿಷ್ಟ ಜಾತಿ ಹಾಗು ಪಂಗಡದ ರೈತರು ತಮಗಿರುವ ತುಂಡು ಭೂಮಿಗಳಲ್ಲಿ ಬೆಳೆ ಬೆಳೆಯಲು ಸರ್ಕಾರ ವಿವಿಧ ನಿಗಮಗಳ ಮುಖಾಂತರ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಲು ೩ ಲಕ್ಷ ನೀಡುತ್ತಿದೆ.
ಈ ಯೋಜನೆಯಿಂದ ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಹಾಗು ಪಂಗಡದ ರೈತರೂ ಸಹ ಕೊಳವೆ ಬಾವಿ ಕೊರೆಸಿ ಉತ್ತಮ ಕೃಷಿ ಮಾಡಲು ಸಹಕಾರಿಯಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಪ್ರಸ್ತುತ ವರ್ಷದಲ್ಲಿ ತಾಲೂಕಿನಲ್ಲಿ ಕೊಳವೆಬಾವಿಗಳನ್ನು ಕೊರೆಯಿಸಿರುವ ಬಹುತೇಕ ರೈತರಿಗೆ ಈಗಾಗಲೇ ಮೋಟರ್ ಪಂಪು ವಿತರಿಸಲಾಗಿದ್ದು ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಆನಂದಪ್ಪ, ಕ್ಷೇತ್ರಾಭಿವೃದ್ಧಿ ಅಧಿಕಾರಿ ರಾಜಶೇಖರ್, ವೆಂಕಟಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಘುನಾಥ್, ಮುನಿರಾಜು, ಬೈರೇಗೌಡ, ಕುಂದಲಗುರ್ಕಿ ಚಂದ್ರು, ಮುನಿಯಪ್ಪ ಹಾಜರಿದ್ದರು.