ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಎಂ.ಶಿವಕುಮಾರ್ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಗಣಿತ ಆನ್ ಲೈನ್ ಪುನರಾವರ್ತನಾ ತರಗತಿಯನ್ನು ಶುಕ್ರವಾರ ಪ್ರಾರಂಭ ಮಾಡಿದ್ದಾರೆ.
ವಿದ್ಯಾರ್ಥಿಗಳು ಮನೆಯಲ್ಲಿಯೇ ಇದ್ದು ಈ ತಿಂಗಳ ಪೂರ್ತಿ ಪ್ರತಿದಿನ ಬೆಳಗ್ಗೆ 9 ರಿಂದ 10 ಗಂಟೆ ವರೆಗೂ ಗಣಿತ ತರಗತಿಗೆ ಹತ್ತನೇ ತರಗತಿಯ ಯಾವುದೇ ವಿದ್ಯಾರ್ಥಿ ಲಾಗಿನ್ ಆಗಿ ತರಗತಿಯಲ್ಲಿ ಭಾಗವಹಿಸಿ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ತರಬೇತಿ ನೀಡಿ ಮಾತನಾಡಿದ ಶಿಕ್ಷಕ ಎಂ.ಶಿವಕುಮಾರ್, “ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಸಲಹೆ ಅನ್ವಯ ಆನ್ ಲೈನ್ ತರಗತಿಗಳನ್ನು ಹಮ್ಮಿಕೊಂಡಿದ್ದು, ಪ್ರತಿ ವಿದ್ಯಾರ್ಥಿಯೂ ತಮ್ಮ ಬಳಿ ಇರುವ ಮೊಬೈಲ್ ನಲ್ಲಿ ಈ ತರಗತಿಗೆ ಲಾಗಿನ್ ಆಗಬಹುದು.
ಕೊರೊನಾ ಸೋಂಕು ಹರಡದಂತೆ ಲಾಕ್ ಡೌನ್ ಮಾಡಿರುವುದರಿಂದ ರಜಾ ಅವಧಿಯಂತಾಗಿದ್ದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತಾವುಗಳು ವರ್ಷ ಪೂರ್ತಿ ಓದಿರುವುದನ್ನು ಮರೆಯುವಂತಾಗಿದೆ. ಫೇಸ್ ಬುಕ್, ವಾಟ್ಸ್ಅಪ್ ಗಳಲ್ಲಿ ವಿದ್ಯಾರ್ಥಿಗಳನ್ನು ಒಟ್ಟಿಗೆ ಕಾಣಲಿಕ್ಕೆ ಸಾಧ್ಯವಿಲ್ಲ ಮತ್ತು ಅವರೊಂದಿಗೆ ಸಂವಾದಿಸಲು ಸಹ ಸಾಧ್ಯ ಇಲ್ಲ. ಆದರೆ ಜೂಮ್ ಅಫ್ ನ ಮೂಲಕ ಒಂದೇ ಬಾರಿ ಅನೇಕ ವಿದ್ಯಾರ್ಥಿಗಳನ್ನು ಸಂಪರ್ಕಿಸಬಹುದು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಬಹುದು ಹಾಗೂ ತರಗತಿಯ ಸಹ ಪರಸ್ಪರ ಸಂವಾದಿಸುವ ರೀತಿಯಿದ್ದು ಪರಿಣಾಮಕಾರಿಯಾಗಿರುತ್ತದೆ. ಇದಾದ ನಂತರ ಮಕ್ಕಳಿಗೆ ಚಟುವಟಿಕೆ ನೀಡಲಾಗುತ್ತದೆ. ಚಟುವಟಿಕೆಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಅದನ್ನು ಫೋಟೋ ತೆಗೆದು ಮುಖ್ಯಶಿಕ್ಷಕರ ಹಾಗೂ ಶಿಕ್ಷಕರ ವಾಟ್ಸ್ ಅಪ್ ಗೆ ಕಳುಹಿಸಬೇಕು. ಶಿಕ್ಷಕರು ಅದನ್ನು ಪರಿಶೀಲಿಸಿ ತಪ್ಪುಗಳು ಇದ್ದಲ್ಲಿ ಅದನ್ನು ಸರಿಪಡಿಸಿ ಮಾರ್ಗದರ್ಶನ ನೀಡಲಾಗುತ್ತದೆ. ಇದು ಕೇವಲ ಚೀಮಂಗಲ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಈ ಲಾಕ್ ಡೌನ್ ಅವಧಿಯಲ್ಲಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಪಬ್ಲಿಕ್ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಎಂದು ಹೇಳಿದರು.
ಆಸಕ್ತ ವಿದ್ಯಾರ್ಥಿಗಳು ಈ ಕೆಳಕಂಡ ಮೊಬೈಲ್ ನಂಬರ್ ಗೆ ಮೆಸೇಜ್ ಕಳಿಸಿದರೆ ಅವರಿಗೆ ಲಾಗಿನ್ ಲಿಂಕನ್ನು ಕಳುಹಿಸಿಕೊಡಲಾಗುವುದು.
ಮೊಬೈಲ್ ಸಂಖ್ಯೆ 9449702666.