Home News ಗಣೇಶ ಚತುರ್ಥಿಯ ಅಂಗವಾಗಿ ಶಾಂತಿಸಭೆ

ಗಣೇಶ ಚತುರ್ಥಿಯ ಅಂಗವಾಗಿ ಶಾಂತಿಸಭೆ

0

ಗಣೇಶನ ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಗಟ್ಟಲು ನಾಗರಿಕರು ಸಹಕರಿಸಬೇಕು ಎಂದು ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಕೃಷ್ಣಮೂರ್ತಿ ಹೇಳಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಮಂಗಳವಾರ ಆಯೋಜಿಸಲಾಗಿದ್ದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಗಣಪತಿ ವಿಗ್ರಹಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಲು ಇಚ್ಚಿಸುವ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗು ನಾಗರಿಕರು ಕಡ್ಡಾಯವಾಗಿ ನಗರಸಭೆ ಸೇರಿದಂತೆ ಬೆಸ್ಕಾಂ ಹಾಗು ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಳ್ಳುವುದರೊಂದಿಗೆ ಆಯಾ ಇಲಾಖೆಯವರು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಅನುಮತಿ ಪಡೆಯದೆ ಗಣೇಶನ ಪ್ರತಿಷ್ಠಾಪನೆಗೆ ಯಾರಾದರೂ ಮುಂದಾದಲ್ಲಿ ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಗಣೇಶನ ಪ್ರತಿಷ್ಠಾಪನೆಯ ದಿನಾಂಕ ಸೇರಿದಂತೆ ಸ್ಥಳ, ವಿಸರ್ಜನೆ ಮಾಡುವ ದಿನಾಂಕ, ಮೆರವಣಿಗೆ ಹೋಗುವ ಮಾರ್ಗ, ವಿಸರ್ಜನೆ ಮಾಡುವ ಸ್ಥಳ ಮುಂತಾದ ಅಗತ್ಯವಾದ ಮಾಹಿತಿಯನ್ನು ಪೊಲೀಸ್ ಠಾಣೆಗೆ ಕಡ್ಡಾಯವಾಗಿ ನೀಡಬೇಕು. ವಿಸರ್ಜನೆಯ ದಿನಾಂಕದಂದು ಗಣೇಶನ ಮೂರ್ತಿಯನ್ನು ಸಂಜೆ ೬ ಗಂಟೆಯ ಒಳಗೆ ವಿಸರ್ಜಿಸಬೇಕು ಎಂದರು.
ಹಬ್ಬಗಳನ್ನು ಆಚರಿಸುವುದು ಸಂತೋಷ ಪಡಲಿಕ್ಕಾಗಿಯೇ ಹೊರತು ಅನ್ಯ ಧರ್ಮೀಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಿಕ್ಕಲ್ಲ. ಹಬ್ಬದ ಹೆಸರಿನಲ್ಲಿ ನಾಗರಿಕರ ಭಾವನೆಗಳಿಗೆ ಧಕ್ಕೆಯುಂಟಾಗದಂತೆ ಹಬ್ಬಗಳನ್ನು ಆಚರಿಸಲು ಗಣೇಶ ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ವ್ಯವಸ್ಥಾಪನಾ ಸಮಿತಿ ರಚಿಸಿಕೊಳ್ಳಬೇಕು ಹಾಗೂ ಸಮಿತಿಯ ಎಲ್ಲಾ ಸದಸ್ಯರ ವಿಳಾಸ ಸೇರಿದಂತೆ ದೂರವಾಣಿ ಸಂಖ್ಯೆಗಳನ್ನು ಇಲಾಖೆಗೆ ನೀಡುವುದರೊಂದಿಗೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದರು.
ಗಣೇಶನ ಮೂರ್ತಿಯ ವಿಸರ್ಜನೆ ವೇಳೆಯಲ್ಲಿ ನಾಗರಿಕರು ಅದರಲ್ಲಿಯೂ ಮುಖ್ಯವಾಗಿ ಯುವಕರು ಸಂಯಮದಿಂದ ವರ್ತಿಸಬೇಕು. ವಿನಾಕಾರಣ ಪಟಾಕಿಗಳನ್ನು ಸಿಡಿಸುವುದು ಹಾಗೂ ಮದ್ಯಪಾನ ಮಾಡಿ ಮೆರವಣಿಗೆಯಲ್ಲಿ ಅನುಚಿತವಾಗಿ ವರ್ತಿಸುವಂತಹವರನ್ನು ಆಯಾ ಸಂಘ ಸಂಸ್ಥೆಗಳವರೇ ನಿಯಂತ್ರಿಸಬೇಕು. ಇಲಾಖೆ ಸೂಚಿಸುವಂತಹ ಸ್ಥಳದಲ್ಲಿಯೇ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಬೇಕು ಎಂದರು.
ತಹಸೀಲ್ದಾರ್ ಕೆ.ಎಂ. ಮನೋರಮಾ ಮಾತನಾಡಿ ಗಣೇಶನ ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯಾ ವ್ಯವಸ್ಥಾಪನಾ ಸಮಿತಿ ಸದಸ್ಯರು ನೋಡಿಕೊಳ್ಳಬೇಕು. ಹಬ್ಬದ ಆಚರಣೆಯ ಹೆಸರಲ್ಲಿ ರಾತ್ರಿಯಿಡೀ ಧ್ವನಿವರ್ಧಕಗಳನ್ನು ಬಳಸುವುದರಿಂದ ವೃದ್ದರೂ ಹಾಗು ಮಕ್ಕಳಿಗೆ ತೊಂದರೆಯಾಗುತ್ತದೆ ಹಾಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ ೧೦ ಗಂಟೆಯ ನಂತರ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದರು.
ಶಿಡ್ಲಘಟ್ಟ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ವೆಂಕಟೇಶ್, ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ನವೀನ್, ಗ್ರಾಮಾಂತರ ಠಾಣೆಯ ಸಬ್ಇನ್ಸ್ ಪೆಕ್ಟರ್ ಪ್ರದೀಪ್ ಪೂಜಾರಿ, ದಿಬ್ಬೂರಹಳ್ಳಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿಜಯ್, ಬೆಸ್ಕಾಂ ಇಲಾಖೆಯ ಎಇಇ ಪರಮೇಶಪ್ಪ, ನಗರಸಭೆ ಆಯುಕ್ತ ಎಚ್.ಎ. ಹರೀಶ್, ನಗರಸಭೆ ಸದಸ್ಯರು ಸೇರಿದಂತೆ ವಿವಿಧ ಮುಖಂಡರು ಹಾಜರಿದ್ದರು.