Home News ಗಾಂಧೀಜಿ ಪಾಲಿಸಿದ ಸತ್ಯ ಸಾರ್ವಕಾಲಿಕ

ಗಾಂಧೀಜಿ ಪಾಲಿಸಿದ ಸತ್ಯ ಸಾರ್ವಕಾಲಿಕ

0

ಗಾಂಧೀಜಿ ಪಾಲಿಸಿದ ಸತ್ಯ, ಅಹಿಂಸೆ, ರಾಮರಾಜ್ಯ, ಗ್ರಾಮೀಣ ಉದ್ಯೋಗ, ಶ್ರಮ ಸಂಸ್ಕೃತಿಗಳೆಲ್ಲ ಸಾರ್ವಕಾಲಿಕ ಮಾರ್ಗದರ್ಶಿ ಸೂತ್ರಗಳು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್.ಚಂದ್ರಾನಾಯಕ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಯು.ಐ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ, ಮಹತ್ಮ ಗಾಂಧೀಜಿ ಅವರ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇವತ್ತಿನ ಪೀಳಿಗೆಗೆ ಮಹಾತ್ಮ ಗಾಂಧಿಯ ವಿಚಾರಧಾರೆಗಳು ತತ್ತ್ವಗಳು ಬೆರಗುಗಣ್ಣುಗಳಿಂದ ಓದುವುದು ಕೇಳುವುದು ಆಗಿದೇ ಹೊರತು, ಪರಿಪಾಲನೆ ಇಲ್ಲದಾಗಿದೆ. ಗಾಂಧೀಜಿಯವರ ಅಧಿಕಾರ ವಿಕೇಂದ್ರೀಕರಣ ತತ್ತ್ವ, ರೈತರ ಸ್ವಾವಲಂಬಿ ಬದುಕು, ಗುಡಿಕೈಗಾರಿಕೆಗೆ ಒತ್ತು ನೀಡುವಿಕೆ, ಶ್ರಮ ಸಂಸ್ಕ್ರತಿ, ಸರಳ ಜೀವನ, ನೈತಿಕ ವ್ಯಾಪಾರ, ಅತಿಯಾದ ಯಂತ್ರಗಳ ಅವಲಂಭನೆ ಇಲ್ಲದಿರುವುದು ಇವೆಲ್ಲವೂ ಇಂದಿಗೂ ಭಾರತದ ಗ್ರಾಮಗಳಲ್ಲಿ ಅಲ್ಪ ಸ್ವಲ್ಪ ಉಳಿದುಕೊಂಡಿದೆ ಎಂದರು.
ಎನ್.ಎಸ್.ಯು.ಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ಮಾತನಾಡಿ,ಕೃಷಿ ಮಾನವ ಶ್ರಮವನ್ನು ಬೇಡುತ್ತದೆ. ಗಾಂಧೀಜಿ ಹೇಳಿದ್ದು ಸಹ ಶ್ರಮ ಸಂಸ್ಕ್ರತಿ. ಇವತ್ತು ಸರ್ಕಾರಗಳು ಗ್ರಾಮಗಳಲ್ಲಿ ಜಾರಿಗೆ ತಂದಿರುವ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಹ ಗಾಂಧೀಜಿ ತತ್ತ್ವಗಳ ಆಚರಣೆಯ ಮುಖ್ಯ ಭಾಗವಾಗಿದೆ. ಮಹಾತ್ಮ ಗಾಂಧಿಯ ಸರಳ ಜೀವನ ಎಲ್ಲರಿಗೂ ಮಾದರಿ ಎಂದು ಹೇಳಿದರು.
ಉಪನ್ಯಾಸಕರಾದ ರಾಮಚಂದ್ರಪ್ಪ, ವೆಂಕಟರೋಣಪ್ಪ, ಎನ್.ಎಸ್.ಯು.ಐನ ಲಕ್ಷ್ಮೀನರಸಿಂಹ, ಗೌರಿಶ್, ಗಜೇಂದ್ರ ಕಾರ್ಯಕ್ರಮದಲ್ಲಿ ಹಾಜರಿದ್ದರು.