ತಾಲ್ಲೂಕಿನ ಗುಡಿಹಳ್ಳಿಯ ಪಾರ್ವತಾಂಬ ಸಮೇತ ಶ್ರೀ ಸೋಮೇಶ್ವರಸ್ವಾಮಿ ಬ್ರಹ್ಮರಥೋತ್ಸವವನ್ನು ಮಂಗಳವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಮನ್ಮಥನಾಮ ಸಂವತ್ಸರ ಮಾಘ ಮಾಸ ಬಹುಳ ಮಂಗಳವಾರದ ಅಭಿಜನ್ನ ಮಹೂರ್ತದಲ್ಲಿ ನಡೆದ ಬ್ರಹ್ಮರಥೋತ್ಸವಕ್ಕೆ ಶಾಸಕ ಎಂ.ರಾಜಣ್ಣ ಮತ್ತು ತಹಶೀಲ್ದಾರ್ ಕೆ.ಎಂ.ಮನೋರಮಾ ಚಾಲನೆ ನೀಡಿದರು.
ಶುಕ್ರವಾರದಿಂದ ಒಂದು ವಾರದ ಕಾಲ ನಡೆಯುವ ಪೂಜಾವಿಧಿಗಳಲ್ಲಿ ಮಂಗಳವಾರ ವಿಶೇಷವಾಗಿತ್ತು. ದೇವರನ್ನು ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ರಥವನ್ನೂ ಸಿಂಗರಿಸಿ ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿಗೆ ಪೂಜೆಯನ್ನು ನೆರವೇರಿಸಿ ಭಕ್ತರು ರಥವನ್ನು ಎಳೆದರು. ದವನ ಸಿಕ್ಕಿಸಿರುವ ಬಾಳೆಹಣ್ಣನ್ನು ರಥದೆಡೆಗೆ ಎಸೆದು ಭಕ್ತಿಯಿಂದ ಪ್ರಾರ್ಥಿಸಿದರು.
ಪೋಟಿ ವೇಷ, ತಮಟೆ, ಡೋಲು ಮೆರವಣಿಗೆಯಲ್ಲಿದ್ದು, ಆಕರ್ಷಣೀಯವಾಗಿತ್ತು. ಭಕ್ತರಿಗೆ ಅನ್ನಸಂತರ್ಪಣೆಯನ್ನೂ ನಡೆಸಲಾಯಿತು.
ಆಗಮಿಕರಾದ ಗಣೇಶ್ ದೀಕ್ಷಿತ್, ಗ್ರಾಮಸ್ಥರಾದ ಚನ್ನಕೃಷ್ಣಪ್ಪ, ಜಿ.ವಿ.ಮುನಿವೆಂಕಟಸ್ವಾಮಿ, ನರಸಿಂಹಮೂರ್ತಿ, ವೆಂಕಟರೆಡ್ಡಿ, ದೇವರಾಜ್, ಜಿ.ಎನ್.ನಾರಾಯಣಸ್ವಾಮಿ, ಶ್ರೀರಾಮಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.