ಗ್ರಾಮೀಣ ಭಾಗದಲ್ಲಿ ಕ್ರೀಡಾಭ್ಯಾಸ ಮಾಡಲು ಕ್ರೀಡಾಂಗಣಗಳು ಇಲ್ಲದಿರುವುದರಿಂದ ಕ್ರೀಡಾಪಟುಗಳಿಗೆ ತೊಂದರೆಯಾಗಿದೆ. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹಮ್ಮಿಕೊಂಡಿರುವ ಗುಡ್ಡಗಾಡು ಕ್ರೀಡಾಕೂಟ ಇತರರಿಗೆ ಮಾದರಿಯಾಗಿದೆ ಎಂದು ತಾಲ್ಲೂಕು ಪಂಚಾಯತಿ ಸದಸ್ಯ ಕೆ.ಎಂ.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ದ್ಯಾವಪ್ಪನಗುಡಿಯಲ್ಲಿ ಶನಿವಾರ ಭಗತ್ಸಿಂಗ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಗುಡ್ಡಗಾಡು ಓಟದ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯವಾಗಿದೆ. ನಮ್ಮ ಗ್ರಾಮೀಣ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡು ತಾಲ್ಲೂಕಿಗೆ ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು.
ಆರು ಕಿ.ಮೀ ದೂರದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ 150ಕ್ಕೂ ಅಧಿಕ ಮಂದಿ ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಜೇತರಾದ 10 ಮಂದಿ ಕ್ರೀಡಾಪಟುಗಳಿಗೆ ಬಹುಮಾನ ಹಾಗೂ ಕ್ರೀಡಾ ಸಮವಸ್ತ್ರಗಳನ್ನು ವಿತರಿಸಲಾಯಿತು.
ಭಗತ್ಸಿಂಗ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಎಂ.ದೇವರಾಜು, ಕಾರ್ಯದರ್ಶಿ ನಾರಾಯಣಸ್ವಾಮಿ, ಉಪಾಧ್ಯಕ್ಷ ಸುಧಾಕರರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯ ಎಲ್.ಚಂದ್ರಶೇಖರ್, ಮುಖ್ಯ ಶಿಕ್ಷಕ ಸುಬ್ಬಾರೆಡ್ಡಿ, ಟಿ.ಟಿ.ನರಸಿಂಹಪ್ಪ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ರವಿಪ್ರಕಾಶ್, ಶಿಕ್ಷಕಿ ಸಿ.ಕೆ.ಮಂಜುಳ, ಸಹಶಿಕ್ಷಕರಾದ ಜೀವಿಂದರ್ ಕುಮಾರ್, ಶಿವಕುಮಾರಸ್ವಾಮಿ, ಕಲ್ಪನಾ, ರಾಧಾಕೃಷ್ಣ, ಸುಮಲತಾ, ಮಾಲತೇಶ್ ಹಳ್ಳೇರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.