Home News ಗುಲಾಬಿ ಬೆಳೆದವರ ಮೊಗದಲ್ಲಿ ನಗುವಿಲ್ಲ

ಗುಲಾಬಿ ಬೆಳೆದವರ ಮೊಗದಲ್ಲಿ ನಗುವಿಲ್ಲ

0

‘ನಗುವಾ ಗುಲಾಬಿ ಹೂವೆ’ ಎಂಬುದು ಗುಲಾಬಿಗಷ್ಟೇ ಸೀಮಿತವಾಗಿದೆ. ಎಲ್ಲರಲ್ಲೂ ಆಹ್ಲಾದ ಭಾವವನ್ನು ಉಂಟು ಮಾಡುವ ಗುಲಾಬಿಯನ್ನು ಬೆಳೆಯುವ ರೈತನ ಮೊಗದಲ್ಲಿ ಮಾತ್ರ ನಗುವಿಲ್ಲದಂತಾಗಿದೆ.
ಸಾಕಷ್ಟು ಶ್ರಮವಹಿಸಿ ಬೆಳೆ ಬೆಳೆದ ರೈತರು ಬೆಲೆ ಕುಸಿತದಿಂದಾಗಿ ಕಂಗಾಲಾಗುವ ಪರಿಸ್ಥಿತಿ ಉಂಟಾಗಿದೆ. ವರಮಹಾಲಕ್ಷ್ಮಿ ಹಬ್ಬದ ಹಿಂದಿನ ದಿನ ಒಂದು ಕೆಜಿಗೆ 110 ರೂಗಳಿಗೆ ಬಟನ್ಸ್ ಗುಲಾಬಿಯನ್ನು ಮಾರಿದ್ದವರು ಈಗ 15 ರೂಗಳಿಗೆ ಮಾರಿ ಬರುವ ಸ್ಥಿತಿ ಒದಗಿದೆ. ಅದರ ಸಾಗಾಣಿಕಾ ವೆಚ್ಚವೂ ಸಿಗದಿದ್ದಾಗ ರೈತರಿಗೆ ಅವರ ಶ್ರಮ ಜೀವನದ ಬಗ್ಗೆ ಅಪನಂಬಿಕೆ ಮೂಡುತ್ತಿದೆ.

ಚರಿಷ್ಮಾ ಅಥವಾ ಬಟನ್ಸ್ ಎಂದು ಕರೆಯುವ ಕಡುಕೇಸರಿ ಬಣ್ಣದ ಗುಲಾಬಿ ಹೂ
ಚರಿಷ್ಮಾ ಅಥವಾ ಬಟನ್ಸ್ ಎಂದು ಕರೆಯುವ ಕಡುಕೇಸರಿ ಬಣ್ಣದ ಗುಲಾಬಿ ಹೂ

ನಗರದ ಬೈಪಾಸ್ ರಸ್ತೆಯಲ್ಲಿ 24 ಗುಂಟೆ ಜಮೀನಿನಲ್ಲಿ ಚರಿಷ್ಮಾ ಅಥವಾ ಬಟನ್ಸ್ ಎಂದು ಕರೆಯುವ ಕಡುಕೇಸರಿ ಬಣ್ಣದ ಗುಲಾಬಿ ಹೂಗಳನ್ನು ಬೆಳೆದಿರುವ ವಿ. ಶ್ರೀಧರ್ ತಮ್ಮ ಬೆಳೆಯ ಬೆಲೆಯು ಕುಸಿತ ಕಾಣುತ್ತಿರುವುದರ ಬಗ್ಗೆ ವಿಷಾಧದಿಂದ ತಿಳಿಸುತ್ತಾರೆ.
ಎಲೆ ಉದುರುವ ರೋಗ, ಚುಕ್ಕೆ ರೋಗ, ಬೂದಿ ರೋಗ, ರೆಡ್ ಮೈಟ್ಸ್, ಮೊಗ್ಗಿ ರೋಗ ಮುಂತಾದ ಹತ್ತು ಹಲವು ರೋಗಗಳಿಂದ ಗುಲಾಬಿ ಗಿಡಗಳನ್ನು ಜೋಪಾನ ಮಾಡಬೇಕು. ವಾರಕ್ಕೊಮ್ಮೆ ಔಷಧಿ ಸಿಂಪಡಿಸಬೇಕು. ನೀರು ಸಮರ್ಪಕವಾಗಿ ಹಾಯಿಸಬೇಕು. ಕೊಟ್ಟಿಗೆ ಗೊಬ್ಬರ, ಹೊಂಗೆ ಇಂಡಿ, ಬೇವಿನ ಇಂಡಿ ನೀಡಿ ಭೂಮಿಯನ್ನು ಫಲವತ್ತತೆಗೊಳಿಸಬೇಕು. ಡಿ.ಎ.ಪಿ ಸಹ ನೀಡಬೇಕು. ಕಳೆ ತೆಗೆಯಬೇಕು. ಇಷ್ಟೆಲ್ಲಾ ಮಾಡಿದರೂ ಮಾರುಕಟ್ಟೆ ಸೂತ್ರ ಸರಳವಾಗಿಲ್ಲ. ಕಷ್ಟಪಟ್ಟು ಬೆಳೆಯುವ ಬೆಳೆಯು ಮಾರುಕಟ್ಟೆಯ ಇಳಿತದಿಂದ ಬೆಲೆಯಿಲ್ಲದಂತಾಗುತ್ತದೆ ಎನ್ನುತ್ತಾರೆ ಶ್ರೀಧರ್.
ಗುಲಾಬಿಯನ್ನು ಬೆಳೆಯುವವರು ಹೆಚ್ಚಾಗಿರುವುದು ಬೆಲೆ ಕುಸಿತಕ್ಕೆ ಒಂದು ಕಾರಣವಾದರೆ, ಹಬ್ಬದ ನಂತರದ ದಿನಗಳಲ್ಲಿ ದಿಢೀರ್ ಕುಸಿತ ಕಾಣುವುದು ಮತ್ತೊಂದು ಕಾರಣವಾಗಿದೆ. ಒಟ್ಟಾರೆ ನಷ್ಟ ಹೊಂದುವುದು ಮಾತ್ರ ರೈತನೇ. ಗುಲಾಬಿಯಿಂದ ಗುಲ್ಕನ್ ಮೊದಲಾದ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹ ನೀಡಿದಲ್ಲಿ ಬೆಳೆಯುವ ರೈತರಿಗೆ ನಷ್ಟವಾಗುವುದಿಲ್ಲ ಎಂದು ಅವರು ಸಲಹೆ ನೀಡಿದರು.