೨೧ ಮಂದಿ ಸದಸ್ಯರು ಗೈರು ಹಾಜರಾದ ಕಾರಣ ನಗರಸಭೆ ಅಧ್ಯಕ್ಷ ಅಪ್ಸರ್‌ಪಾಷ ಅಧ್ಯಕ್ಷತೆಯಲ್ಲಿ ಮಂಗಳವಾರ ಕರೆಯಲಾಗಿದ್ದ ೨೦೧೯-೨೦ ನೇ ಸಾಲಿನ ನಗರಸಭೆ ಆಯ-ವ್ಯಯ ಸಭೆಯನ್ನು ಫೆ ೨೬ ಕ್ಕೆ ಮುಂದೂಡಲಾಯಿತು.
ನಗರಸಭೆ ಅಧ್ಯಕ್ಷ ಅಪ್ಸರ್‌ಪಾಷ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್ ಸೇರಿದಂತೆ ಒಟ್ಟು ಆರು ಸದಸ್ಯರು ಮಾತ್ರ ಸಭೆಯಲ್ಲಿ ಹಾಜರಿದ್ದು, ಇನ್ನುಳಿದ ಸದಸ್ಯರು ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಅಧಿಕಾರಿಗಳು ಸೇರಿದಂತೆ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಕೆಲ ಸದಸ್ಯರು ಸುಮಾರು ಒಂದು ತಾಸು ಕಾದು ಕುಳಿತರಾದರೂ ಉಳಿದ ಸದಸ್ಯರು ಬಾರದ ಕಾರಣ ಸಭೆಯನ್ನು ಮುಂದೂಡಲಾಯಿತು.
ಈ ಬಗ್ಗೆ ಅಧ್ಯಕ್ಷ ಅಪ್ಸರ್‌ಪಾಷ ಮಾತನಾಡಿ ನಗರಸಭೆ ಸದಸ್ಯರು ಸಭೆಗೆ ಹಾಜರಾಗಿ ನಗರಸಭೆಯಲ್ಲಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಅದನ್ನು ಬಿಟ್ಟು ರಸ್ತೆಯಲ್ಲಿ ಆರೋಪಗಳನ್ನು ಮಾಡಿಕೊಂಡು ತಿರುಗಾಡುವುದರಿಂದ ಏನೂ ಪ್ರಯೋಜನವಿಲ್ಲ. ಪ್ರತಿಯೊಬ್ಬ ಗೌರವಾನ್ವಿತ ಸದಸ್ಯರು ಸಭೆಗೆ ಹಾಜರಾಗಿ ಕುಂದು ಕೊರತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಿಕೊಳ್ಳಬೇಕು. ಇದೀಗ ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿದ್ದು ಮುಂದಿನ ಸಭೆಗೆ ಎಲ್ಲರೂ ಬರುವಂತೆ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದರು.
ಈ ಬಗ್ಗೆ ಗೈರು ಹಾಜರಾಗಿದ್ದ ಸದಸ್ಯರ ಪರವಾಗಿ ೧ ನೇ ವಾರ್ಡಿನ ಸದಸ್ಯ ಲಕ್ಷ್ಮಯ್ಯ ಮಾತನಾಡಿ “ನಗರಸಭೆ ಸದಸ್ಯರಾಗಿ ನಮ್ಮ ವಾರ್ಡುಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸಲಾಗುತ್ತಿಲ್ಲ, ಈ ಬಗ್ಗೆ ಅಧ್ಯಕ್ಷರೂ ಹಾಗು ಪೌರಾಯುಕ್ತರೊಂದಿಗೆ ಸಾಕಷ್ಟು ಭಾರಿ ಚರ್ಚಿಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ನಾವೇನೇ ಮಾತನಾಡಲಿ ಅದಕ್ಕೆ ತದ್ವಿರುದ್ದವಾಗಿ ಮಾತನಾಡುವ ಅಧಿಕಾರಿಗಳಿಂದ ನಗರದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳಾಗುತ್ತಿಲ್ಲ. ಹಾಗಾಗಿ ನಾವುಗಳು ಯಾವುದೇ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ” ಎಂದು ಹೇಳಿದರು.
ಸಭೆ ಮುಂದೂಡುವ ಮೊದಲು ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.