ಸಾಹಿತ್ಯ ಮತ್ತು ದೇಶಭಕ್ತಿ ಎರದೂ ಸಹ ಎಳೆಯ ವಯಸ್ಸಿನಿಂದಲೇ ಮಕ್ಕಳಿಗೆ ತಿಳಿಸುವ ಕೆಲಸ ಕಸಾಪ ವತಿಯಿಂದ ಮಾಡಲಾಗುತ್ತಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲ್ಲೂಕಿನ ಕಂಬದಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಕಸಾಪ ವತಿಯಿಂದ ಆಯೋಜಿಸಲಾಗಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮದಿನಾಚರಣೆ ಮತ್ತು ಆಜಾದ್ ಹಿಂದ್ ಫೌಜ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಾಹಿತ್ಯ ಸೃಷ್ಟಿ ಸಮೃದ್ಧವಾದುದು. ಪ್ರಬಂಧ, ಕಥೆ, ಕಾದಂಬರಿ, ಪ್ರವಾಸ ಕಥನ, ವಿಮರ್ಶೆ, ಜೀವನ ಚಿತ್ರ, ಭಾಷಾಂತರ – ಹೀಗೆ ಅನೇಕ ಪ್ರಕಾರಗಳಿಗೆ ಅವರ ಕೊಡುಗೆ ಸಂದಿದೆ. ಗೊರೂರರ ಸಿದ್ಧಿ, ಪ್ರಸಿದ್ಧಿಗಳಿಗೆ ಮುಖ್ಯವಾದ ಆಧಾರ, ಅವರ ಪ್ರಬಂಧಗಳು. ಅವರು ತಮ್ಮ ಪ್ರಬಂಧ ಸಾಹಿತ್ಯದಿಂದ ನಾಡನ್ನು ನಗಿಸಿ ನಲಿಸಿದ್ದಾರೆ ಎಂದು ಹೇಳಿದರು.
ಶಿಕ್ಷಕ ಸುಂದರಾಚಾರಿ ಮಾತನಾಡಿ, 50,000ಕ್ಕೂ ಹೆಚ್ಚು ಸೈನಿಕರಿದ್ದ ಆಜಾದ್ ಹಿಂದ್ ಸೈನ್ಯದ ಹೋರಾಟ ನಮ್ಮ ಸ್ವಾತಂತ್ರ್ಯ ಆಂದೋಲನದ ಬಹುಮುಖ್ಯ ಅಧ್ಯಾಯಗಳಲ್ಲೊಂದು. ಆದರೆ ನಮ್ಮ ಇತಿಹಾಸದ ಪುಟಗಳಲ್ಲಿ ಈ ಹೆಚ್ಚು ವಿವರ ಇಲ್ಲದಿರುವುದು ದೌರ್ಭಾಗ್ಯವೇ ಸರಿ. ಆಜಾದ್ ಹಿಂದ್ ಸ್ಥಾಪನಾ ದಿನದಂದು ಆ ಸೈನ್ಯ ಮತ್ತು ಅದರ ವೀರಸೇನಾನಿಗಳ ಬಲಿದಾನವನ್ನು ನೆನೆಯುವುದು ನಮ್ಮೆಲ್ಲರ ಆದ್ಯಕರ್ತವ್ಯ ಎಂದು ಹೇಳಿದರು.
ಕಸಾಪ ವತಿಯಿಂದ ಮುಖ್ಯಶಿಕ್ಷಕಿ ಎನ್.ಈಶ್ವರಮ್ಮ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕ ಲೋಕನಾಥ್, ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್, ಮಂಜುನಾಥ್ ಹಾಜರಿದ್ದರು.