Home News ಗೋಡಂಬಿ ಬೆಳೆ ಕ್ಷೇತ್ರೋತ್ಸವ ಮತ್ತು ಚರ್ಚಾ ಗೋಷ್ಠಿ

ಗೋಡಂಬಿ ಬೆಳೆ ಕ್ಷೇತ್ರೋತ್ಸವ ಮತ್ತು ಚರ್ಚಾ ಗೋಷ್ಠಿ

0

ಇತ್ತೀಚಿನ ವರ್ಷಗಳಲ್ಲಿ ಗೋಡಂಬಿ ಬೆಳೆಯು ಒಣ ತೋಟಗಾರಿಕಾ ಬೇಸಾಯಕ್ಕೆ ಒಂದು ಪ್ರಮುಖವಾದ ಬೆಳೆಯಾಗಿ ಹೊರಹೊಮ್ಮುತಿದೆ. ಇದರ ಉತ್ಪಾದನಾ ತಾಂತ್ರಿಕತೆಗಳನ್ನು ರೈತರಿಗೆ ಮನವರಿಕೆ ಮಾಡಿಕೊಳ್ಳಲು ಇದು ಸೂಕ್ತ ಸಮಯವಾಗಿರುವುದರಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಚ್ಚಿನ್‌ನ ಗೋಡಂಬಿ ಹಾಗೂ ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ವೆಂಕಟೇಶ ಎನ್‌.ಹುಬ್ಬಳ್ಳಿ ತಿಳಿಸಿದರು.
ತಾಲ್ಲೂಕಿನ ಎಚ್‌.ಕ್ರಾಸ್‌ ಬಳಿಯ ಕುಂಬಿಗಾನಹಳ್ಳಿಯ ಸಮೀಪದ ನಾಗರಾಜ್‌ರವರ ಗೋಡಂಬಿ ತೋಟದಲ್ಲಿ ಗುರುವಾರ ಕೇಂದ್ರ ಸರ್ಕಾರದ ಗೋಡಂಬಿ ಹಾಗೂ ಕೊಕೋ ಅಭಿವೃದ್ಧಿ ನಿದೆರ್ಶನಾಲಯದಿಂದ ಅನುದಾನಿತವಾದ, ಪ್ರಾದೇಶಿಕ ತೋಟಗಾರಿಕಾ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೋಡಂಬಿ ಬೆಳೆ ಕ್ಷೇತ್ರೋತ್ಸವ ಮತ್ತು ಚರ್ಚಾ ಗೋಷ್ಠಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬರಡು ಭೂಮಿಯಲ್ಲೂ ಬೆಳೆಸಬಹುದಾದ ಬೆಳೆ ಇದಾಗಿದೆ. ವಿಭಿನ್ನ ಬೆಳೆಯಾಗಿರುವ ಗೋಡಂಬಿ ಬೆಲೆ ಎಂದಿಗೂ ಕಡಿಮೆಯಾಗಿಲ್ಲ. ನಮ್ಮ ದೇಶದಿಂದ 28 ದೇಶಗಳಿಗೆ ಗೋಡಂಬಿ ರಫ್ತಾಗುತ್ತಿದೆ. ಇದರಿಂದ ವಾರ್ಷಿಕ ಸಾವಿರಾರು ಕೋಟಿ ರೂಗಳ ವರಮಾನ ಬರುತ್ತಿದೆ. ಗೋಡಂಬಿ ಬೆಳೆಯಲ್ಲಿ ವರಮಾನ, ಇಳವರಿಯಿದ್ದರೂ ಬೆಳೆ ಬೆಳೆಯಲು ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗೋಡಂಬಿ ಬೆಳೆಯುವಲ್ಲಿ ಪ್ರಬಲವಾಗಬೇಕಿದ್ದು, ಅವಕಾಶವನ್ನು ಉಪಯೋಗಿಸಬೇಕಿದೆ. ಸುಲಭವಾದ ಬೆಳೆಯನ್ನು ನಿರ್ಲಕ್ಷ್ಸಿಸಿದರೆ ತೊಂದರೆಗೀಡಾಗಲಿದ್ದೇವೆ ಎಂದ ಅವರು ಟೀ ಸೊಳ್ಳೆ, ಕಾಂಡಾ ಕೊರೆಯುವ ಹುಳು ತೊಂದರೆಯಿದ್ದರೂ ದೊಡ್ಡ ಪ್ರಮಾಣದಲ್ಲಿ ರೋಗಗಳಿಲ್ಲ. ಹೂವು ಬಿಟ್ಟಾಗ ಮಾತ್ರ ಕೆಲಸವಿರುತ್ತವೆ, ಮಳೆಗಾಲ ಆರಂಭವಾದಾಗ ಹನಿ ನೀರಾವರಿ ಅಳವಡಿಸಿದಲ್ಲಿ ಅನುಕೂಲದ ಜತೆಗೆ ಇಳುವರಿಯೂ ಜಾಸ್ತಿಯಾಗುವುದು ಎಂದರು.
‘ಗೋಡಂಬಿಯ ಸುಧಾರಿತ ಬೇಸಾಯ ಕ್ರಮಗಳು ಹಾಗೂ ತಂತ್ರಜ್ಞಾನ’ ಕುರಿತಂತೆ ವಿಜ್ಞಾನಿ ಡಾ.ವಿಷ್ಣುವರ್ಧನ ಮಾತನಾಡಿದರು. ‘ಮಣ್ಣು ಮತ್ತು ನೀರಿನ ಸಂರಕ್ಷಣೆ’ ಕುರಿತಂತೆ ಡಾ.ಎಸ್‌.ವಿ.ಪಾಟೀಲ್‌, ಡಾ.ಅನಿಲ್‌ಕುಮಾರ್‌ ಹಾಗೂ ಡಾ.ನಾಗರಾಜ ವಿವರಿಸಿದರು. ‘ಸಸ್ಯ ಸಂರಕ್ಷಣೆ’ ಬಗ್ಗೆ ಡಾ.ಜಿ.ಕೆ.ರಾಮೇಗೌಡ, ‘ಗೋಡಂಬಿಯಲ್ಲಿ ಕೊಯ್ಲೋತ್ತರ ತಾಂತ್ರಿಕತೆ ಮತ್ತು ಮೌಲ್ಯವರ್ಧನೆ’ ಕುರಿತು ಸುರೇಶ್‌, ‘ಸಂಸ್ಕರಣೆ ಹಾಗೂ ಮಾರುಕಟ್ಟೆ’ ಕುರಿತು ವೈ.ಪಿ.ಅಮರನಾಥ್‌, ‘ಮಾರುಕಟ್ಟೆ ಹಾಗೂ ವಿಸ್ತರಣೆ’ ಬಗ್ಗೆ ಡಾ.ಜಿ.ಬಸವರಾಜ್‌, ಡಾ.ಮಮತಾಲಕ್ಷ್ಮಿ, ಡಾ.ಬಿ.ಎಸ್‌.ಶ್ವೇತಾ ಮಾತನಾಡಿದರು.
ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ನಿವೃತ್ತ ಶಿಕ್ಷಣ ನಿರ್ದೇಶಕ ಡಾ.ಜೆ.ವೆಂಕಟೇಶ್‌, ಪುತ್ತೂರಿನ ಗೋಡಂಬಿ ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಗಂಗಾಧರ ನಾಯಕ್‌, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಗೋಡಂಬಿ ಬೆಳೆಗಾರರು ಹಾಜರಿದ್ದರು.