Home News ಗೋದಾಮಿನ ಉದ್ಘಾಟನೆ

ಗೋದಾಮಿನ ಉದ್ಘಾಟನೆ

0

ಗ್ರಾಮ ಪಂಚಾಯಿತಿ ಸ್ಥಿರಾಸ್ತಿ ಹಾಗೂ ಚರಾಸ್ತಿಗಳನ್ನು ಕಾಪಾಡುವುದೂ ಹಾಗೂ ಗ್ರಾಮ ಪಂಚಾಯಿತಿಗೆ ಅಗತ್ಯವಿರುವ ಗೋದಾಮುಗಳ ನಿರ್ಮಾಣಕ್ಕೆ ಜನಪ್ರತಿನಿಧಿಗಳೂ ಸೇರಿದಂತೆ ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನರೇಗಾ ಯೋಜನೆಯಡಿ ಸುಮಾರು ೮ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಗೋದಾಮಿನ ಉದ್ಘಾಟನೆಯನ್ನು ಸೋಮವಾರ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿಗಳಲ್ಲಿ ಸ್ಥಳಾವಕಾಶದ ಕೊರತೆಯಿಂದ ನೀರು ಸರಬರಾಜು ಮಾಡುವ ಪೈಪುಗಳು, ಮೋಟರ್, ಪಂಪುಗಳು ದುರುಪಯೋಗವಾಗುತ್ತದೆ. ಇದನ್ನು ತಪ್ಪಿಸಲು ಪಂಚಾಯಿತಿಗೊಂದರಂತೆ ಗೋದಾಮು ನಿರ್ಮಾಣ ಮಾಡಿಕೊಂಡರೆ ಸಾಮಗ್ರಿಗಳನ್ನು ಸಂಗ್ರಹಿಸಿಡುವುದರ ಜೊತೆಗೆ ಪಂಚಾಯಿತಿಗೆ ಸೇರಿದ ಎಲ್ಲಾ ಸಾಮಾನು ಸರಂಜಾಮುಗಳ ಲೆಕ್ಕ ಸಿಗುತ್ತದೆ ಎಂದರು.
ಮುಂಬರುವ ದಿನಗಳಲ್ಲಿ ತಾಲ್ಲೂಕಿನ ಉಳಿದೆಲ್ಲಾ ಗ್ರಾಮ ಪಂಚಾಯಿತಿಗಳವರು ನರೇಗಾ ಯೋಜನೆಯನ್ನು ಬಳಸಿಕೊಂಡು ಇಂತಹ ಗೋದಾಮು ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಮುಂದಾಗಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ ಕದಿರಪ್ಪ, ಉಪಾಧ್ಯಕ್ಷ ಸುರೇಂದ್ರ, ಸದಸ್ಯರಾದ ದೇವರಾಜ್, ಪದ್ಮಮ್ಮ, ಮುಖಂಡರಾದ ಮುನಿಯಪ್ಪ, ಪಿಡಿಓ ರಾಮಕೃಷ್ಣ ಹಾಜರಿದ್ದರು.