Home News ಗೋಮಾಳದಲ್ಲಿ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರಿಂದ ತಡೆ

ಗೋಮಾಳದಲ್ಲಿ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರಿಂದ ತಡೆ

0

ನಿರ್ದಿಷ್ಟ ಉದ್ದೇಶವಿಲ್ಲದೇ ಗ್ರಾಮದ ಗೋಮಾಳದಲ್ಲಿ ರಸ್ತೆ ನಿರ್ಮಿಸಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ರಸ್ತೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿ ಅಧಿಕಾರಿಗಳು ಹಾಗು ಗುತ್ತಿಗೆದಾರರು ಬರಿಗೈಲಿ ವಾಪಸ್ಸಾದ ಘಟನೆ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ವೇ ನಂ ೧ ರ ಗೋಮಾಳ ಜಮೀನಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುವ ಗುಂಪೊಂದು ಯಾವುದೇ ಯೋಜನೆಯ ಆದೇಶವಿಲ್ಲದೇ ಏಕಾಏಕಿ ಜೆ.ಸಿ.ಬಿ ಯೊಂದಿಗೆ ಬಂದು ಗೋಮಾಳದಲ್ಲಿ ರಸ್ತೆ ನಿರ್ಮಿಸಲು ಸಿದ್ದತೆ ನಡೆಸಿದ್ದರು.
ಇದನ್ನು ಕಂಡ ಗ್ರಾಮಸ್ಥರು ಯಾವ ಇಲಾಖೆಯಿಂದ, ಯಾವ ಯೋಜನೆಯಡಿ ರಸ್ತೆ ನಿರ್ಮಿಸುತ್ತಿದ್ದೀರಿ. ಯಾವ ಉದ್ದೇಶಕ್ಕೆ ಗೋಮಾಳದಲ್ಲಿ ರಸ್ತೆ ನಿರ್ಮಿಸುತ್ತಿದ್ದೀರಿ. ಎನ್ನುವ ಪ್ರಶ್ನೆಗಳನ್ನು ಕೇಳಿದ್ದಾರೆ, ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲರಾಗಿದ್ದಾರೆ.
ಇದರಿಂದ ಕುಪಿತಗೊಂಡ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಜೆ.ಸಿ.ಬಿ ಯ ಕಾರ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ರಸ್ತೆ ಮಾಡಲು ಇಲ್ಲಿಗೆ ಕಳುಹಿಸಿದವರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟುಹಿಡಿದರು. ರಸ್ತೆ ನಿರ್ಮಿಸಲು ಬಂದವರ ಮೊಬೈಲ್ ಕರೆಯ ಮೇರೆಗೆ ಕೆಲ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕು ಲೋಕೋಪಯೋಗಿ ಇಲಾಖೆಯ ಎ.ಇ.ಇ ಗಣಪತಿಸಾಕರೆ, ತಹಶೀಲ್ದಾರ್ ಕೆ.ಎಂ.ಮನೋರಮಾ, ಕಂದಾಯ ನಿರೀಕ್ಷಕ ಸುಬ್ರಮಣಿ, ಅಪ್ಪೇಗೌಡನಹಳ್ಳಿ ವೃತ್ತದ ಗ್ರಾಮ ಲೆಕ್ಕಿಗ ಆನಂದ್ ಮತ್ತಿತರ ಅಧಿಕಾರಿಗಳು ಪೋಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳನ್ನು ಗ್ರಾಮಸ್ಥರು ನಮ್ಮ ಗ್ರಾಮದ ಗೋಮಾಳದಲ್ಲಿ ರಸ್ತೆ ನಿರ್ಮಿಸುವ ಉದ್ದೇಶ, ಕ್ರಿಯಾಯೋಜನೆ, ಅಂದಾಜುಪಟ್ಟಿ, ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರ ಯಾರು. ಎಲ್ಲದಕ್ಕೂ ಮಿಗಿಲಾಗಿ ಇಲ್ಲಿ ರಸ್ತೆ ನಿರ್ಮಿಸುವುದರಿಂದ ಯಾರಿಗೆ ಏನು ಲಾಭ ಎಂದು ಪ್ರಶ್ನಿಸಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಸೂಕ್ತ ಉತ್ತರವಾದರೂ ನೀಡಿ. ಇಲ್ಲವೇ, ಕಾಮಗಾರಿ ಸ್ಥಗಿತಗೊಳಿಸಿ ಹೊರಡಿ ಎಂಬ ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು ಕಾಮಗಾರಿ ನಿಲ್ಲಿಸಿ ಸೋಮವಾರ ಉಪವಿಭಾಗಾಧಿಕಾರಿ ಸ್ಥಳ ಪರಿಶೀಲನೆ ನಡೆಸಿದ ನಂತರ ಕಾಮಗಾರಿ ಶುರು ಮಾಡಲಾಗುವುದು. ಅದುವರೆಗೂ ಯಥಾ ಸ್ಥಿತಿ ಕಾಪಾಡುವಂತೆ ಸೂಚಿಸಿ ಅಲ್ಲಿಂದ ಹೊರಟಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ತ್ಯಾಗರಾಜ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರವಿಪ್ರಕಾಶ್, ಗ್ರಾಮಸ್ಥರಾದ ಆನಂದಮೂರ್ತಿ, ಸಂಪತ್, ಮಧು, ರಾಜಪಟೇಲಪ್ಪ, ಕಾಮೇಶ್, ಉಮೇಶ್, ಮುನಿರಾಜು, ಪಾಪಣ್ಣ, ಗಂಗಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.