Home News ಗ್ರಾಮದಲ್ಲಿ ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮ

ಗ್ರಾಮದಲ್ಲಿ ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮ

0

ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದರ ಜೊತೆಗೆ ಪ್ಲಾಸ್ಟಿಕ್ ನಿಷೇಧ ಮಾಡುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಎಲ್ಲರೂ ಬದ್ಧರಾಗಬೇಕು ಎಂದು ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಸೋಮವಾರ ಗಾಂಧಿ ಜಯಂತಿ ಅಂಗವಾಗಿ ಆಯೋಜನೆ ಮಾಡಲಾಗಿದ್ದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಚ್ಚತೆಯಿಂದ ಮಾತ್ರವೇ ಉತ್ತಮ ಆರೋಗ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ರೋಗ ಮುಕ್ತವಾದ ಜೀವನ ನಡೆಸಬೇಕಾದರೆ, ನಮ್ಮ ಮನೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡಬೇಕು. ನಾಗರಿಕರು ಚರಂಡಿಗಳಿಗೆ ಕಸ ಎಸೆಯುವುದನ್ನು ಬಿಡಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದ್ದು, ನಾಗರಿಕರು ಈ ಕಾರ್ಯಕ್ಕೆ ಉತ್ತಮ ಸಹಕಾರ ನೀಡಬೇಕು ಎಂದರು.
ಬೆಂಗಳೂರಿನ ವಂದೇ ಮಾತರಂ ಸಂಸ್ಥೆಯ ಸಂಸ್ಥಾಪಕ ಬಿ.ಎಚ್.ಲೊಕೇಶ್ ಮಾತನಾಡಿ, ಪ್ರಜ್ಞಾವಂತರಾದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಇತರರಿಗೂ ಜಾಗೃತಿ ಮೂಡಿಸಬೇಕಾಗಿದೆ. ಸ್ವಚ್ಚತೆ ಕಾಪಾಡಲು ಸರ್ಕಾರ ಕೋಟ್ಯಾಂತರ ರೂಪಾಯಿಗಳ ಹಣವನ್ನು ವ್ಯಯ ಮಾಡುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಗ್ರಾಮದ ಗಂಗಾತಾಯಿ ದೇವಾಲಯದ ಸುತ್ತಮುತ್ತಲಿನ ಪ್ರದೇಶವು ಸೇರಿದಂತೆ ಪ್ರಮುಖ ಬೀದಿಗಳನ್ನು ಸ್ವಚ್ಚಗೊಳಿಸಿದರು.
ಮೇಲೂರಿನ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸ್ವಚ್ಚ ಭಾರತ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು.
ಕಾವೇರಿ ನ್ಯಾಯ ಮಂಡಳಿ ವಿವಾದ ನಿವೃತ್ತ ನಿರ್ದೇಶಕ ಪ್ರಭಾಕರಶೆಟ್ಟಿ, ಜೈ ಕೀರ್ತಿ ಸಂಸ್ಥೆಯ ಸಂಸ್ಥಾಪಕ ಸುಧಾರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎನ್.ರೂಪೇಶ್, ಎಂ.ಎನ್.ಧರ್ಮೇಂದ್ರ, ಕಾರ್ಯದರ್ಶಿ ಪಿ.ವಿ.ಸಿದ್ದಣ್ಣ, ಕರವಸೂಲಿಗಾರ ಜಿ.ಎಂ.ಜನಾರ್ಧನ್, ಶ್ರೀನಿವಾಸಮೂರ್ತಿ(ಪುಲಿ), ಜಯಮ್ಮ, ಶಿವಕುಮಾರ್, ನರಸಿಂಹಪ್ಪ, ಮುಂತಾದವರು ಹಾಜರಿದ್ದರು.