Home News ಗ್ರಾಮದ ಮಹಿಳೆಯರ ಸ್ವಾವಲಂಬಿ ಕೇಂದ್ರವಾದ ಹಳೆಯ ಕಟ್ಟಡ

ಗ್ರಾಮದ ಮಹಿಳೆಯರ ಸ್ವಾವಲಂಬಿ ಕೇಂದ್ರವಾದ ಹಳೆಯ ಕಟ್ಟಡ

0

ಹಲವಾರು ಗ್ರಾಮಗಳು ಹಾಗೂ ಊರುಗಳಲ್ಲಿ ಹಳೆಯ ಕಟ್ಟಡಗಳು, ಹಾಳು ಬಿದ್ದ ಮಂಟಪಗಳು ಮತ್ತು ಧರ್ಮಛತ್ರಗಳು ಕಾಣಸಿಗುತ್ತವೆ. ಹಿಂದೆ ಹಿರಿಯರು ದಾರಿ ಹೋಕರು, ಊರೂರು ತಿರುಗುವ ವ್ಯಾಪಾರಸ್ಥರ ಅನುಕೂಲಕ್ಕಾಗಿ, ಶುಭ ಸಮಾರಂಭಗಳಿಗೆಂದು ಧರ್ಮಛತ್ರಗಳನ್ನು ನಿರ್ಮಿಸುತ್ತಿದ್ದರು. ಕಾಲ ಬದಲಾದಂತೆ ಅವುಗಳು ಅವಶ್ಯಕತೆಗಳಿಲ್ಲವಾಗಿ ಹಲವೆಡೆ ಪಾಳುಬಿದ್ದಿವೆ.
ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿದ್ದ ಹಾಳುಬಿದ್ದ ಧರ್ಮಛತ್ರವನ್ನು ಪುನರುಜ್ಜೀವನಗೊಳಿಸಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರಳಾಗುವ ಕಟ್ಟಡವನ್ನಾಗಿಸಲಾಗಿದೆ. ಗ್ರಾಮ ಹಾಗೂ ಊರುಗಳಲ್ಲಿನ ಹಾಳುಬಿದ್ದ ಕಟ್ಟಡಗಳು ಅನೈತಿಕ ಚಟುವಟಿಕೆಗಳ ತಾಣಗಳಾಗುತ್ತಿರುವಾಗ ಗ್ರಾಮಾಭಿವೃದ್ಧಿಗೆ ಪೂರಕವಾಗುವಂತೆ ಸಮುದಾಯವು ಬಳಸಿಕೊಳ್ಳಬಹುದಾದ ಸಾಧ್ಯತೆಗಳಿಗೆ ಮಾದರಿಯಾಗಿದ್ದಾರೆ ಮುತ್ತೂರು ಗ್ರಾಮಸ್ಥರು.
ಸುಮಾರು ನೂರು ವರ್ಷಗಳ ಹಿಂದೆ ಮುತ್ತೂರು ಗ್ರಾಮದ ಮಡಿವಾಳಿ ನಂದೆಪ್ಪ ಎಂಬುವವರು ಗ್ರಾಮಕ್ಕೆ ಬಂದು ಹೋಗುವವರ ಅನುಕೂಲಕ್ಕಾಗಿ ಪುಟ್ಟ ಕಟ್ಟಡವೊಂದನ್ನು ನಿರ್ಮಿಸಿದ್ದರು. ಅದು ಜನರ ಬಾಯಲ್ಲಿ ನಂದೆಪ್ಪನ ಮಠ ಎಂದಾಗಿ, ದಾರಿಹೋಕರು ಮತ್ತು ನಿರ್ಗತಿಕರ ಆಶ್ರಯತಾಣವಾಗಿತ್ತು. ಕಾಲಾನಂತರ ಗ್ರಾಮದಲ್ಲಿ ಮೊಟ್ಟಮೊದಲು ಪ್ರೌಢಶಾಲೆ ಪ್ರಾರಂಭಿಸಿದಾಗ ಸ್ವಂತ ಕಟ್ಟಡವಿರದಿದ್ದುದರಿಂದ ನಂದೆಪ್ಪನ ಮಠದಲ್ಲೇ ಶಾಲೆಯು ಶುರುವಾಯಿತು. ಮುಂದೆ ಶಾಲೆಯು ತನ್ನದೇ ಸ್ವಂತ ಕಟ್ಟಡಕ್ಕೆ ವರ್ಗಾಯಿಸಲ್ಪಟ್ಟಿತು. ಅಲ್ಲೀಂದೀಚೆಗೆ ಈ ಕಟ್ಟಡವು ದನಕರುಗಳನ್ನು ಕಟ್ಟುವ, ಮೇವನ್ನು ಸಂಗ್ರಹಿಸುವ ತಾಣವಾಯಿತು. ಹೀಗಾಗಿ ಸೂಕ್ತ ನಿರ್ವಹಣೆಯಿಲ್ಲದೆ ಶಿಥಿಲಗೊಂಡಿತ್ತು.
ದಿ.ಸಂಜಯ್ದಾಸ್ಗುಪ್ತ ಅವರ ನೆನಪಿನ ‘ನಮ್ಮ ಮುತ್ತೂರು’ ಸಂಸ್ಥೆಯು ಗ್ರಾಮಸ್ಥರ ಸಹಕಾರದಿಂದ ಶಿಥಿಲಗೊಂಡಿದ್ದ ನಂದೆಪ್ಪನ ಮಠವನ್ನು ಪುನರುಜ್ಜೀವನಗೊಳಿಸಿ ಗ್ರಾಮದ ಮಹಿಳೆಯರು ಸ್ವಾವಲಂಬಿಗಳಾಗಲು ಟೈಲರಿಂಗ್ ತರಬೇತಿ ಹಾಗೂ ವಿವಿಧ ಉತ್ಪನ್ನಗಳ ತಯಾರಿಕಾ ಘಟಕವನ್ನಾಗಿಸಿದ್ದಾರೆ.
‘ಇದು ಒಬ್ಬರಿಂದಾದ ಕೆಲಸವಲ್ಲ. ಗ್ರಾಮಸ್ಥರ ಅನುಮತಿ ಮತ್ತು ಸಹಕಾರದೊಂದಿಗೆ ಹಲವಾರು ಉದಾರ ಹೃದಯಿಗಳು ಒಗ್ಗೂಡಿದ್ದರಿಂದ ಸಾಧ್ಯವಾಯಿತು. ಹಳೆಯ ಕಲ್ಲಿನ ಕಟ್ಟಡವನ್ನು ಹಾಗೆಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗೋಡೆಯ ಮಣ್ಣು ಪರೀಕ್ಷೆಯನ್ನು ಪ್ರೊ.ಯೋಗಾನಂದ ಮತ್ತು ಪ್ರಮೋದ್ ಅವರಿಂದ ಮಾಡಿಸಿದೆವು. ಕಟ್ಟಡವು ಗಟ್ಟಿಮುಟ್ಟಾಗಿದೆಯೆಂದು ಅವರು ವರದಿ ನೀಡಿದ ನಂತರ ಕಟ್ಟಡ ವಿನ್ಯಾಸಗಾರರಾದ ಅಖಿಲಾ ರಮೇಶ್ ಮತ್ತು ತಂಡದ ಸಹಾಯ ಪಡೆದು ಕೆಲಸ ಪ್ರಾರಂಭಿಸಿದೆವು. ನಮ್ಮ ಕಾರ್ಯದಲ್ಲಿ ಆರ್ಥಿಕ ನೆರವನ್ನು ಸ್ವಸ್ಥಿ ಸೇವಾ ಸಂಸ್ಥೆ ಮತ್ತು ಎಡಿಫೈಸ್ ಕನ್ಸಲ್ಟೆಂಟ್ ನೀಡಿದರೆ, ರಿಷ್ಮಾ ಕೌರ್ ಕಟ್ಟಡಕ್ಕೆ ಬಣ್ಣವನ್ನು ಒದಗಿಸಿದರು. ಸಮುದಾಯದ ಉಪಯೋಗಕ್ಕೆಂದು ಹಿಂದೆ ನಿರ್ಮಿಸಿದ್ದ ಕಟ್ಟಡವನ್ನು ಪುನಃ ಸಮುದಾಯಕ್ಕಾಗಿ ಅರ್ಪಿಸಲಾಗಿದೆ. ಹಳೆಯ ಕಟ್ಟಡಕ್ಕೆ ನವೀನ ತಂತ್ರಜ್ಞಾನದ ಲೇಪನವಾಗಿದೆ. ಗ್ರಾಮದ ಮಹಿಳೆಯರು ತಯಾರಿಸುವ ಉಡುಪುಗಳು, ಬ್ಯಾಗ್ ಮುಂತಾದವುಗಳ ಪುಟ್ಟ ಕೇಂದ್ರವಾಗಿದೆ’ ಎಂದು ಹೆಮ್ಮೆಪಡುತ್ತಾರೆ ‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ.
–ಡಿ.ಜಿ.ಮಲ್ಲಿಕಾರ್ಜುನ.
[images cols=”three” lightbox=”true”]
[image link=”2151″ image=”2151″]
[image link=”2152″ image=”2152″]
[image link=”2153″ image=”2153″]
[/images]