ಸರ್ಕಾರ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು ಅವನ್ನು ಸದ್ಭಳಕೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ದ್ಯಾವಪ್ಪನಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಹೆಣ್ಣುಮಕ್ಕಳು ಕನಿಷ್ಠ ಪದವಿಯವರೆಗಾದರೂ ವಿದ್ಯಾಭ್ಯಾಸ ಮಾಡಬೇಕು. ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ದುಡಿದು ಆರ್ಥಿಕವಾಗಿ ಭದ್ರತೆಯನ್ನು ಪಡೆದುಕೊಳ್ಳಬೇಕು. ಆಗ ಸಮಾಜ ಬದಲಾಗಲು ಸಾಧ್ಯ. ಎಷ್ಟೇ ಕೊರತೆಗಳಿದ್ದರೂ ಅವನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡಬೇಕು. ಈಗ ಕಷ್ಟಪಟ್ಟು ಓದಿದರೆ ಮುಂದೆ ಅದರ ಫಲ ಸಿಕ್ಕೇಸಿಗುತ್ತದೆ ಎಂದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ಶಿಸ್ತು, ಸಮಯಪ್ರಜ್ಞೆ ಇರದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗದು. ಬಾಲ್ಯದಲ್ಲಿ ಕಲಿತದ್ದು ಕೊನೆಯವರೆಗೂ ಉಳಿಯುತ್ತದೆ. ಹಾಗಾಗಿ ಉತ್ತಮ ನಡತೆಯನ್ನು ಬೆಳೆಸಿಕೊಂಡು ತಂದೆ ತಾಯಿ ಮತ್ತು ಹುಟ್ಟಿದೂರಿಗೆ ಕೀರ್ತಿ ತರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸುಬ್ಬಾರೆಡ್ಡಿ ಶಾಲೆಗೆ ಕಾಂಪೌಂಡ್, ಹೆಚ್ಚುವರಿ ಕೊಠಡಿ, ವಿಜ್ಞಾನ ಪ್ರಯೋಗಾಲಯ ಮತ್ತು ರಂಗಮಂದಿರ ಪೂರ್ನಗೊಳಿಸಿಕೊಡಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ್, ಮಾಜಿ ಸದಸ್ಯ ಮಾಸ್ತಿ, ದೇವರಾಜ್, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.