ತಾಲ್ಲೂಕಿನ ದೊಡ್ಡತೇಕಹಳ್ಳಿಯ ದಾಸಪ್ಪನಬಾವಿ ಎಂದೇ ಕರೆಯುವ ಕಲ್ಯಾಣಿಯನ್ನು ಬಶೆಟ್ಟಹಳ್ಳಿ ಹೋಬಳಿ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯಿಂದ ಶ್ರಮದಾನದ ಮೂಲಕ ಸ್ವಚ್ಛತೆ ಕೆಲಸವನ್ನು ಮಾಡಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್ ಮಾತನಾಡಿ, “ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲ್ಲೂಕಿನ ಕಲ್ಯಾಣಿಗಳು ನೀರು ಹಿಡಿದಿಡಲು ಯೋಗ್ಯವಾಗುವ ರೀತಿಯಲ್ಲಿ ಸ್ವಚ್ಛಗೊಳಿಸುತ್ತಿದ್ದೇವೆ. ಜಿಲ್ಲೆಯಲ್ಲಿ ನೀರಿನ ಕೊರತೆ ಉಂಟಾಗಿದ್ದು, ಸಾವಿರಾರು ಆಡಿ ಕೊರೆದರೂ ನೀರು ಸಿಗುವುದು ಕಷ್ಟವಾಗಿದೆ. ಸಿಕ್ಕ ಅಲ್ಪ ಸ್ವಲ್ಪ ನೀರು ಫ್ಲೋರೈಡ್ ನೀರಾಗಿದ್ದು, ಆ ನೀರನ್ನು ಉಪಯೋಗಿಸಲು ಯೋಗ್ಯವಾಗಿಲ್ಲ. ಇದಕ್ಕೆ ಮೂಲ ಕಾರಣ ಅಂತರ್ಜಲ ನೀರಿನ ಮಟ್ಟ ಕುಸಿತ. ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಜಿಲ್ಲೆಯಾದ್ಯಂತ ಇರುವ ಕಲ್ಯಾಣಿಗಳು, ಕುಂಟೆಗಳು, ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ಶುಚಿಗೊಳಿಸಲು ಮುಂದಾಗಿದ್ದೇವೆ. ತಾಲ್ಲೂಕಿನ ಪಟ್ಟಣ, ಗ್ರಾಮಗಳು ಸೇರಿದಂತೆ ಎಲ್ಲಾ ಕಡೆ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿದೆ” ಎಂದು ತಿಳಿಸಿದರು.
ತಾಲ್ಲೂಕಿನ ದೊಡ್ಡತೇಕ ಹಳ್ಳಿಯ ಕಲ್ಯಾಣಿಯು ಸುಮಾರು ೨೦೦-೩೦೦ ವರ್ಷಗಳ ಇತಿಹಾಸ ಹೊಂದಿದೆ. ಈ ಕಲ್ಯಾಣಿಯ ಸುತ್ತ ಆಂಜನೇಯ ಸ್ವಾಮಿ, ಚೆನ್ನಕೇಶವ ಸ್ವಾಮಿ, ವೀರಭದ್ರ ಸ್ವಾಮಿ, ದೇವಾಲಯಗಳಿವೆ. ಈ ಕಲ್ಯಾಣಿಯ ಹಾಗೂ ದೇವಾಲಯಗಳ ಸುತ್ತಮುತ್ತ ಹಳೆಯ ಶಿಲಾಶಾಸಗಳ ಕಲ್ಲುಗಳು ಪತ್ತೆಯಾಗಿವೆ. ಕಲ್ಯಾಣಿಯು ನೋಡಲು ಸುಂದರವಾಗಿದೆ ಎಂದು ತಿಳಿಸಿದರು.
ತಾಲ್ಲೂಕು ನರೇಗಾ ಯೋಜನಾದಿಕಾರಿ ಶ್ರೀನಾಥ್ ಗೌಡ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಿವಾನಂದ್, ಪಿ.ಡಿ.ಒ ತನ್ವೀರ್, ಕಾತ್ಯಾಯಿನಿ ,ಯಮುನಾರಾಣಿ, ಕಾರ್ಯದರ್ಶಿ ನಾಗರಾಜ್, ಮದ್ದರೆಡ್ಡಿ, ರಮೇಶ್, ಸುದಾಕರ್, ಗ್ರಾಮಸ್ಥರಾದ ಗುಮ್ಮರೆಡ್ಡಿ, ದ್ಯಾವಪ್ಪ ಹಾಜರಿದ್ದರು.