Home News ಘನತ್ಯಾಜ್ಯ ವಸ್ತು ವಿವೇವಾರಿ ನಿರ್ವಹಣ ಘಟಕದ ಸುತ್ತ ಬೆಳೆ ಹಾನಿ

ಘನತ್ಯಾಜ್ಯ ವಸ್ತು ವಿವೇವಾರಿ ನಿರ್ವಹಣ ಘಟಕದ ಸುತ್ತ ಬೆಳೆ ಹಾನಿ

0

ತಾಲ್ಲೂಕಿನ ಹಿತ್ತಲಹಳ್ಳಿಯ ಗೇಟ್ ಬಳಿಯಿರುವ ಘನತ್ಯಾಜ್ಯ ವಸ್ತು ವಿವೇವಾರಿ ನಿರ್ವಹಣ ಘಟಕವನ್ನು ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ್ದು ಅದು ಕೇವಲ ಕಸವನ್ನು ಸುರಿಯುವ ತಾಣವಾಗಿ ಬದಲಾಗಿದೆ. ಈ ಕಸದ ರಾಶಿಯು ಕೊಳೆತು ನಾರುತ್ತಾ, ಗಾಳಿಗೆ ಹಾರುವ ಪೇಪರ್ ಮತ್ತು ಪ್ಲಾಸ್ಟಿಕ್ ಹಾಳೆಗಳು ಅಕ್ಕಪಕ್ಕದ ತೋಟಗಳ ಹಿಪ್ಪುನೇರಳೆ ಸೊಪ್ಪಿಗೆ ಮಾರಕವಾಗಿ ಪರಿಣಮಿಸಿವೆ ಎಂದು ರೈತರು ದೂರಿದ್ದಾರೆ.
ನಗರದಿಂದ ಎರಡು ಕಿ.ಮೀ ದೂರದಲ್ಲಿರುವ ಘನತ್ಯಾಜ್ಯ ವಸ್ತು ವಿವೇವಾರಿ ನಿರ್ವಹಣ ಘಟಕಕ್ಕೆ ಲಕ್ಷಾಂತರ ರೂಗಳ ವೆಚ್ಚದಲ್ಲಿ ಕಾಂಪೌಂಡ್, ಸಂಸ್ಕರಣ ಘಟಕಗಳು, ಡಾಂಬರು ರಸ್ತೆ, ವಿದ್ಯುತ್ ದೀಪಗಳು, ಸಂಸ್ಕರಣ ಘಟಕದ ಕಾವಲು ನೌಕರನಿಗೆ ಪ್ರತ್ಯೇಕ ಕೊಠಡಿ ಹೀಗೆ ಹಲವಾರು ಸೌಲಭ್ಯಗಳನ್ನು ವ್ಯವಸ್ಥೆ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ. ಘನತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತೇವೆ. ಈ ಸ್ಥಳವನ್ನು ನಂದನವನವನ್ನಾಗಿಸುತ್ತೇವೆಂದು ಸ್ಥಳೀಯರಿಗೆ ಮತ್ತು ಸುತ್ತಮುತ್ತಲಿನ ರೈತರಿಗೆ ಆಶ್ವಾಸನೆಯನ್ನು ನೀಡಿದ್ದರು. ಆದರೆ ಈಗ ಸುತ್ತಮುತ್ತಲಿನ ರೈತರು ಹಿಪ್ಪುನೇರಳೆ ಸೊಪ್ಪನ್ನು ಸರಿಯಾಗಿ ಬೆಳೆಯದಂತಾಗಿದೆ. ಮಳೆ ಬಿದ್ದರಂತೂ ಈ ಪ್ರದೇಶದಲ್ಲಿ ಮೂಗು ಮುಚ್ಚಿ ಓಡಾಡಬೇಕು. ಮಳೆ ಬಂದರೆ ಕಸವು ಮಳೆ ನೀರಿನಿಂದಿಗೆ ಕೊಚ್ಚಿಕೊಂಡು ರಸ್ತೆಗೆ ಬರುತ್ತದೆ. ಇವರ ಕಾಟದಿಂದ ಕೆರೆಗೆ ನೀರು ಹರಿಯುವ ಕಾಲುವೆಯೂ ಮುಚ್ಚಿಹೋಗಿದ್ದು, ಮಳೆ ನೀರು ಕೆರೆಗೆ ಹರಿಯದೆ ರಸ್ತೆ ಮೇಲೆ ಬರುತ್ತದೆ ಎಂದು ಹಿತ್ತಲಹಳ್ಳಿಯ ರೈತ ಎಚ್.ಜಿ.ಗೋಪಾಲಗೌಡ ದೂರಿದರು.
ವೈಜ್ಞಾನಿಕವಾಗಿ ಘನತ್ಯಾಜ್ಯಗಳನ್ನು ಎರಡು ರೀತಿಯಾಗಿ ವರ್ಗೀಕರಿಸಬೇಕು. ಕ್ರಮೇಣ ಮಣ್ಣಿನಲ್ಲಿ ಸೇರಿಹೋಗುವ ಸಾವಯವ ತ್ಯಾಜ್ಯಗಳು ಮತ್ತು ಮಣ್ಣಿನಲ್ಲಿ ಸೇರದಿರುವ ಪ್ಲಾಸ್ಟಿಕ್, ಕಬ್ಬಿಣ, ತಗಡು, ಬ್ಯಾಟರಿ ಸೆಲ್ ಮುಂತಾದ ತ್ಯಾಜ್ಯಗಳು. ಇವನ್ನು ಪ್ರತ್ಯೇಕಿಸಬೇಕು. ಸಿಎಫ್ಎಲ್ ನಂಥ ಕೆಲವೊಂದು ಅಪಾಯಕಾರಿ ತ್ಯಾಜ್ಯಗಳೂ ಇರುತ್ತವೆ. ಅವು ಒಡೆದರೆ ಅದರಿಂದ ಪಾದರಸದ ಆವಿ ಹೊರಸೂಸುತ್ತದೆ. ಅದು ವಿಷ ಪದಾರ್ಥ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಟ್ಟರೂ ವಿಷಗಾಳಿ ಹೊರಹೊಮ್ಮುತ್ತದೆ. ಆದರೆ ನಗರಸಭೆಯವರು ಯಾವ ವರ್ಗೀಕರಣವನ್ನೂ ಮಾಡದೆ ಕೆವೊಮ್ಮೆ ಕಸಕ್ಕೆ ಬೆಂಕಿ ಹಚ್ಚಿಬಿಡುತ್ತಾರೆ. ಆಗಂತೂ ಹೊಗೆ, ಬೂದಿ ನಮ್ಮ ಬೆಳೆಯನ್ನೆಲ್ಲಾ ಹಾಳು ಮಾಡುತ್ತದೆ. ಇನ್ನು ಮಳೆಗಾಲ ಪ್ರಾರಂಭವಾಗಿದೆ. ರೋಗಗಳು ಹರಡಿ ಅನಾಹುತಗಳಾಗುವ ಮುನ್ನ ನಗರಸಭೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
ಈ ಬಾರಿ ಬೀಳುವ ಮಳೆಗೆ ತ್ಯಾಜ್ಯವೇನಾದರೂ ಹರಿಯುತ್ತಾ ಬಂದಲ್ಲಿ ರೈತರೆಲ್ಲಾ ನಗರಸಭೆಯನ್ನು ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ ಎಂದು ಅವರು ತಿಳಿಸಿದರು.