Home News ಚೀಮಂಗಲ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ

ಚೀಮಂಗಲ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ

0

ಮಕ್ಕಳಿಗೆ ಬರಿ ಓದಿನ ಮಹತ್ವ ತಿಳಿಸಿದರೆ ಸಾಲದು, ಮಗುವಿನ ದೈಹಿಕ ಬೆಳವಣಿಗೆಗೆ ಪೂರಕವಾಗಿ ಕ್ರೀಡೆಯಲ್ಲೂ ಆಸಕ್ತಿ ತೋರುವಂತೆ ಹುರಿದುಂಬಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಶೇಖರ್ ಬಾಬು ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಮಕ್ಕಳಲ್ಲಿ ಅಪಾರ ಪ್ರತಿಭಾವಂತರಿದ್ದಾರೆ. ಅನೇಕರು ಕ್ರೀಡೆಯ ಆಸಕ್ತಿ ಹೊಂದಿರುತ್ತಾರೆ. ಅವರಿಗೆ ಪ್ರೋತ್ಸಾಹ ಮತ್ತು ತರಬೇತಿ ನೀಡಿ ಎಂದರು.
ಮುಖ್ಯ ಶಿಕ್ಷಕ ಶಿವಶಂಕರ್ ಮಾತನಾಡಿ, ಕ್ರೀಡೆಯಿಂದ ಜೀವನದಲ್ಲಿ ಧೈರ್ಯ ದೊರೆಯುತ್ತದೆ, ಬದುಕಲು ಸ್ಫ್ಫೂರ್ತಿ ನೀಡುವ ಕ್ರೀಡೆಯ ಬಗ್ಗೆ ತಾತ್ಸಾರ ಬೇಡ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸಹಜವಾಗಿರುವ ದೇಹದಾಢ್ಯ ಕ್ರೀಡೆಗೆ ಪೂರಕವಾಗಿದೆ. ಗ್ರಾಮೀಣ ಪ್ರದೇಶದವರು ಎಂಬ ಕೀಳರಿಮೆ ತೊರೆದು ಕ್ರೀಡೆಯಲ್ಲಿ ಸಾಧನೆ ಮಾಡಲು ಪಣ ತೊಡಿ ಎಂದು ಹೇಳಿದರು.
ದೈಹಿಕ ಶಿಕ್ಷಕ ವಿಠ್ಠಲ್ ಧ್ಯಾನ್ ಚಂದರ ಜೀವನ ಚರಿತ್ರೆಯನ್ನು ತಿಳಿಸಿದರು. ತುಮ್ಮನಹಳ್ಳಿ ಶಾಲೆಯ ದೈಹಿಕ ಶಿಕ್ಷಕ ಗಣೇಶ್ ಓಲಂಪಿಕ್ಸ್ ಕ್ರೀಡೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಇಸ್ರೋ ವಿಜ್ಞಾನಿಗಳಾದ ಅರವಿಂದ್, ನಾರಾಯಣಸ್ವಾಮಿ ಅವರು ಉಪಗ್ರಹ ಮತ್ತು ರಾಕಟ್ ಉಡಾವಣೆಯ ಮಾಹಿತಿಯನ್ನು ನೀಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಮೂರನೇ ಸ್ಥಾನವನ್ನು ಪಡೆದ ಅನುಷಾ ಅವರಿಗೆ ಲ್ಯಾಪ್ ಟಾಪ್ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಳೆದ ವರ್ಷ ರಾಜ್ಯಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಕೀರ್ತಿ, ವೈಷ್ಣವಿ, ಮೇಘನಾ, ಗಜೇಂದ್ರ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ದೊಡ್ಡನಾಯ್ಕ, ಸವಿತ, ಶ್ರೀನಿವಾಸ, ವಿನೋದ, ಮೋಹನ್ ಹಾಜರಿದ್ದರು.