Home News ಚೆಕ್ ವಿತರಣೆ ಕಾರ್ಯಕ್ರಮ

ಚೆಕ್ ವಿತರಣೆ ಕಾರ್ಯಕ್ರಮ

0

ರೇಷ್ಮೆಗೆ ಹೆಸರುವಾಸಿಯಾಗಿರುವ ತಾಲ್ಲೂಕಿನಲ್ಲಿ ಇತ್ತೀಚೆಗೆ ನೀರಿನ ಅಭಾವದಿಂದಾಗಿ ರೇಷ್ಮೆ ಬೆಳೆ ಕುಸಿಯುತ್ತಿದ್ದು ಉಳಿದಿರುವ ಏಕೈಕ ದಾರಿ ಹೈನುಗಾರಿಕೆಯಾಗಿದೆ. ಹಾಗಾಗಿ ಈ ಉದ್ಯಮದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವುದರೊಂದಿಗೆ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೃತಪಟ್ಟ ರಾಸುಗಳಿಗೆ ವಿಮೆ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿದ್ದು ಹಾಲಿನ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಗುಣಮಟ್ಟದ ಹಾಲು ಸರಬರಾಜು ಮಾಡಿದಲ್ಲಿ ಒಕ್ಕೂಟವೂ ಉಳಿಯುವುದರೊಂದಿಗೆ ಈ ಭಾಗದ ಜನರ ಜೀವನಾಡಿಯಾಗುತ್ತದೆ ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ ಗುಣಮಟ್ಟದ ಹಾಲು ಉತ್ಪಾದನೆ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶ ನೀಡದೆ ಎಲ್ಲರೂ ಒಗ್ಗಟ್ಟಾಗಿ ದುಡಿಯುವುದರೊಂದಿಗೆ ಸಹಕಾರಿ ಸಂಘಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಹಾಲಿನಲ್ಲಿ ಶೇ. ೩.೫ ರಷ್ಟು ಫ್ಯಾಟ್ ಮತ್ತು ಕನಿಷ್ಠ ಶೇ ೮.೫ ಎಸ್ಎನ್ಎಫ್ ಇರಲೆಬೇಕು. ಇಲ್ಲವಾದಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ ನೀಡುತ್ತಿರುವ ೪ ರೂಪಾಯಿಗಳ ಪ್ರೋತ್ಸಾಹದನ ಸೇರಿದಂತೆ ಇತರೆ ಸರ್ಕಾರಿ ಸವಲತ್ತುಗಳಿಗೆ ಕಡಿವಾಣ ಬೀಳಲಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬಳಿ ನಿರ್ಮಾಣವಾಗುತ್ತಿರುವ ಕೋಚಿಮುಲ್ ಮೆಗಾಡೈರಿ ಕಾಮಗಾರಿ ಶೇ. ೭೦ ರಷ್ಟು ಮುಗಿದಿದ್ದು ಸ್ಥಳೀಯರಿಗೆ ಉದ್ಯೋಗವಾಕಾಶ ಕಲ್ಪಿಸುವುದರೊಂದಿಗೆ ಪ್ರತಿನಿತ್ಯ ೫ ಲಕ್ಷ ಲೀ ಗುಡ್ಲೈಫ್ ಫ್ಲೆಕ್ಸಿ ಪ್ಯಾಕ್ ಹಾಲು ಸಿದ್ದವಾಗುತ್ತದೆ. ಹಾಗಾಗಿ ಗುಣಮಟ್ಟದ ಹಾಲಿನ ಪೂರೈಕೆಗೆ ರೈತರು ಸಹಕರಿಸಬೇಕೆಂದರು.
ಕಳೆದ ವರ್ಷ ಮೃತಪಟ್ಟ ಸುಮಾರು ೨೭ ರಾಸುಗಳಿಗೆ ತಲಾ ೪೦ ಸಾವಿರದಂತೆ ಹಾಗು ೨೧ ವಿದ್ಯಾರ್ಥಿಗಳಿಗೆ ಒಟ್ಟು ೧,೫೭ ಸಾವಿರ ರೂ ವಿದ್ಯಾರ್ಥಿವೇತನದ ಚೆಕ್ಕನ್ನು ವಿತರಿಸಲಾಯಿತು.
ಕೋಚಿಮುಲ್ ಹಾಲು ಒಕ್ಕೂಟದ ಶಿಡ್ಲಘಟ್ಟ ಶಿಬಿರದ ವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ, ಸಹಕಾರಿ ಯೂನಿಯನ್ ನಿರ್ದೇಶಕ ರಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.