Home News ಚೌಡಸಂದ್ರ ಗ್ರಾಮದಲ್ಲಿ ಸ್ವಸಹಾಯ ಸಂಘ ಸ್ಥಾಪನೆ

ಚೌಡಸಂದ್ರ ಗ್ರಾಮದಲ್ಲಿ ಸ್ವಸಹಾಯ ಸಂಘ ಸ್ಥಾಪನೆ

0

ಕುಟುಂಬ ನಿರ್ವಹಣೆ ಮತ್ತು ಗ್ರಾಮ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಕನ್ಯಾಡಿ ತಿಳಿಸಿದರು.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಈಚೆಗೆ ಎರಡು ಸ್ವಸಹಾಯ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಗ್ರಾಮದಲ್ಲೂ ಮಹಿಳೆಯರು ತಮ್ಮ ಕೌಟುಂಬಿಕ ಆರ್ಥಿಕ ಪ್ರಗತಿಯನ್ನು ನಡೆಸುತ್ತಾ ಗ್ರಾಮಾಭಿವೃದ್ಧಿಗೂ ಕಯಜೋಡಿಸುವಂತೆ ಪ್ರೇರೇಪಿಸುವುದು ನಮ್ಮ ಉದ್ದೇಶ. ಉಳಿತಾಯ, ಸ್ವಚ್ಛತೆ, ಆರೋಗ್ಯ ಮುಂತಾದವುಗಳ ಮೂಲಕ ಸರ್ವತೋಮುಖ ಬೆಳವಣಿಗೆಯೆಡೆಗೆ ಮಹಿಳೆಯರು ಸಾಗಬೇಕು ಎಂದು ತಿಳಿಸಿದರು.
ಅಭಿವೃದ್ಧಿಯೆಡೆಗೆ ಸಾಗುವಾಗ ಜಾತಿ ಬೇಧ ಮರೆಯಬೇಕು. ಕುಡಿತ ಬಿಡಿಸುವುದು, ತಮ್ಮ ಕಾಲ ಮೇಲೆ ತಾವು ನಿಲ್ಲಲು ಸಹಾಯ ಮಾಡುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಮುಖ್ಯ ಕಾರ್ಯಕ್ರಮಗಳಲ್ಲಿ ಸೇರಿವೆ. ತಾಲ್ಲೂಕಿನಲ್ಲಿ 800 ಸಂಘಗಳನ್ನು ಈವರೆಗೆ ಸ್ಥಾಪಿಸಲಾಗಿದೆ. ತಾಲ್ಲೂಕಿನ ಅಶಕ್ತ 20 ಮಂದಿ ವೃದ್ಧರಿಗೆ ಮಾಸಾಶನ ನೀಡುತ್ತಿದ್ದೇವೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಮುನಿರತ್ನಮ್ಮ, ಎಂ.ಪಿ.ಸಿ.ಎಸ್ ಸದಸ್ಯ ಆನಂದಪ್ಪ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ವೆಂಕಟೇಶ್ಮೂರ್ತಿ, ನಾಗಪ್ಪ, ರಾಮಚಂದ್ರ, ಸಿ.ಪಿ.ಇ. ಕರಗಪ್ಪ, ಮಹೇಶ್, ಹನುಮೇಗೌಡ, ರಾಮಕೃಷ್ಣಪ್ಪ, ಮೇಲ್ವಿಚಾರಕಿ ಶಾಂತಾ, ಸೇವಾಪ್ರತಿನಿಧಿ ಇಂದಿರಾ, ಅಭಯಾಂಜನೇಯಸ್ವಾಮಿ ಸ್ವಸಹಾಯ ಸಂಘದ ಪ್ರತಿನಿಧಿಗಳಾದ ರಾಮಲಕ್ಷ್ಮಮ್ಮ, ಪ್ರಭಾವತಿ, ಮಾಲ, ಭಾರತಾಂಬೆ ಸ್ವಸಹಾಯ ಸಂಘದ ಪ್ರತಿನಿಧಿಗಳಾದ ಅನಿತಾ, ಕಾವ್ಯ, ಮುನಿರತ್ನಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.