Home News ಜಂಗಮಕೋಟೆಯ ಎಸ್‌ಎಫ್‌ಸಿಎಸ್ ಬ್ಯಾಂಕ್‌ನ ಗಂಭೀರನಹಳ್ಳಿ ಶಾಖೆಯ ಕಟ್ಟಡ ಲೋಕಾರ್ಪಣೆ: ಮಹಿಳಾ ಸ್ವ ಸಹಾಯ ಸಂಘ, ರೈತರಿಗೆ...

ಜಂಗಮಕೋಟೆಯ ಎಸ್‌ಎಫ್‌ಸಿಎಸ್ ಬ್ಯಾಂಕ್‌ನ ಗಂಭೀರನಹಳ್ಳಿ ಶಾಖೆಯ ಕಟ್ಟಡ ಲೋಕಾರ್ಪಣೆ: ಮಹಿಳಾ ಸ್ವ ಸಹಾಯ ಸಂಘ, ರೈತರಿಗೆ ೧.೫೫ ಕೋಟಿ ರೂಗಳ ಸಾಲ ವಿತರಣೆ

0

ಈ ಆರ್ಥಿಕ ಸಾಲಿನಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಯಾವೊಬ್ಬ ರೈತನೂ ಡಿಸಿಸಿ ಬ್ಯಾಂಕ್‌ನಿಂದ ಪಡೆದ ಸಾಲದ ಸುಸ್ತಿದಾರನಾಗಿಲ್ಲ ಎಂದು ಡಿಸಿಸಿ ಬ್ಯಾಂಕ್‌ನ ಜಿಲ್ಲಾಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಗಂಭೀರನಹಳ್ಳಿಯಲ್ಲಿ ನಿರ್ಮಿಸಿರುವ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಬ್ಯಾಂಕ್‌ನ ನತನ ಕಟ್ಟಡ, ಶುದ್ದ ಕುಡಿಯುವ ನೀರಿನ ಘಟಕ, ರಸಗೊಬ್ಬರಗಳ ಮಾರಾಟ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಉಭಯ ಜಿಲ್ಲೆಗಳಲ್ಲಿ ಬರಗಾಲ ಮನೆ ಮಾಡಿದ್ದು ನಮ್ಮಲ್ಲೂ ಸಹ ಆತಂಕ ಇತ್ತು. ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದು ಸಾಲ ಮರುಪಾವತಿ ಪ್ರಮಾಣ ಕಡಿಮೆ ಆಗಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ನಮ್ಮ ಲೆಕ್ಕಾಚಾರಗಳು ತಲೆ ಕೆಳಗಾಗಿದ್ದು ರೈತರು ಸಾಲ ಮರುಪಾವತಿ ಮಾಡಿ ಮಾದರಿಯಾಗಿದ್ದಾರೆ ಎಂದರು.
ರೈತರಷ್ಟೆ ಅಲ್ಲ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರೂ ಸಹ ಎಂದಿನಂತೆ ಪೂರ್ತಿ ಸಾಲ ಮರುಪಾವತಿ ಮಾಡುತ್ತಿದ್ದು ಶೇ. ೧೦೦ರಷ್ಟು ಸಾಲ ಮರುಪಾವತಿ ಪ್ರಮಾಣ ಇದೆ ಎಂದು ಹರ್ಷ ವ್ಯಕ್ತಪಡಿಸಿದರು.
ತಾಲ್ಲೂಕಿನ ಎಲ್ಲ ಎಸ್‌ಎಫ್‌ಸಿಎಸ್ ಬ್ಯಾಂಕ್‌ಗಳಲ್ಲೂ ಸಾಲ ಮರುಪಾವತಿ ಉತ್ತಮವಾಗಿದ್ದು ಮುಂದಿನ ದಿನಗಳಲ್ಲಿ ಈ ಎರಡೂ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಮಹಿಳೆಯರು, ರೈತರು, ಕೂಲಿ ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳ ಮನೆ ಮನೆಗೆ ಹೋಗಿ ಸಾಲ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.
ಯಾರಿಗೆ ಹಣಕಾಸಿನ ಅವಶ್ಯಕತೆ ಇದೆಯೋ ಅವರಿಗೆ ನಿಷ್ಪಕ್ಷಪಾತವಾಗಿ ಸಮಯಕ್ಕೆ ಸರಿಯಾಗಿ ಸಾಲ ನೀಡಿದರೆ ಅದನ್ನು ಸದುಪಯೋಗಪಡಿಸಿಕೊಂಡು ಮತ್ತೆ ಸಾಲ ಮರುಪಾವತಿ ಮಾಡುತ್ತಾರೆ ಎಂಬುದಕ್ಕೆ ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದವರೆ ಸಾಕ್ಷಿಯಾಗಿದ್ದಾರೆ ಎಂದರು.
ಜಂಗಮಕೋಟೆಯ ಎಸ್‌ಎಫ್‌ಸಿಎಸ್ ಸಹಕಾರಿ ಬ್ಯಾಂಕ್ ಮೂಲಕ ಇದುವರೆಗೂ ೫೮೪ ಮಂದಿ ರೈತರಿಗೆ ೭.೫೬ ಕೋಟಿ ರೂಗಳ ಕೆಸಿಸಿ ಸಾಲ, ೧೪೪ ಮಂದಿಗೆ ಸೀಮೆ ಹಸುಗಳನ್ನು ಖರೀಸಲು ೫೩ ಲಕ್ಷ, ೪೬ ಸ್ವ ಸಹಾಯ ಸಂಘಗಳಿಗೆ ೧.೩೬ ಕೋಟಿ ರೂಗಳ ಸಾಲ ನೀಡಲಾಗಿದೆ.
ಒಟ್ಟು ೭೭೪ ಮಂದಿಗೆ ೯.೪೫ ಕೋಟಿ ರೂಗಳನ್ನು ಕೃಷಿ, ಹೈನುಗಾರಿಕೆ, ಗುಡಿ ಕೈಗಾರಿಕೆ, ಸ್ವಯಂ ಉದ್ಯೋಗ ಇನ್ನಿತರೆ ಚಟುವಟಿಕೆಗಳಿಗೆ ಸಾಲ ವಿತರಿಸಲಾಗಿದೆ ಎಂದು ಬ್ಯಾಂಕ್‌ನ ವಹಿವಾಟನ್ನು ವಿವರಿಸಿದರು.
ಸುಂಡ್ರಹಳ್ಳಿಯ ಶ್ರೀನಂದಿನಿ ನಲ್ಲೂರು ಬೀರೇಶ್ವರ ಸ್ವ ಸಹಾಯ ಸಂಘಕ್ಕೆ ೧.೨೫,೦೦೦ ರೂ, ಚೊಕ್ಕಂಡಹಳ್ಳಿಯ ಶ್ರೀಮುತ್ತ್ಯಾಲಮ್ಮ ಮಹಿಳಾ ಸಂಘಕ್ಕೆ ೧೦,೦೦,೦೦೦ರೂ, ಜೆ.ವೆಂಕಟಾಪುರದ ಶ್ರೀವಿನಾಯಕ ಮಹಿಳಾ ಸ್ವ ಸಹಾಯ ಸಂಘಕ್ಕೆ ೬,೫೦,೦೦೦ ರೂ ಹಾಗೂ ಧನಲಕ್ಷ್ಮೀ ಸ್ತ್ರಿ ಶಕ್ತಿ ಸಂಘಕ್ಕೆ ೫೦,೦೦೦ ರೂಗಳ ಸಾಲದ ಚೆಕ್ ವಿತರಿಸಲಾಯಿತು.
ಜತೆಗೆ ಆ ಭಾಗದ ರೈತರಿಗೆ ಕೃಷಿ ಸಾಲ ೨೫ ಲಕ್ಷ ಸೇರಿದಂತೆ ಒಟ್ಟು ೧.೫೫ ಕೋಟಿ ರೂಪಾಯಿಗಳ ವಿವಿದ ಬಾಬತ್ತಿನ ಸಾಲದ ಚೆಕ್‌ಗಳನ್ನು ವಿತರಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೆಶಕ ಪಿ.ಶಿವಾರೆಡ್ಡಿ, ಎಸ್‌ಎಫ್‌ಸಿಎಸ್ ಬ್ಯಾಂಕ್ ಅಧ್ಯಕ್ಷ ಯಣ್ಣಂಗೂರು ವೈ.ಬಿ.ಗಣೇಶ್, ಉಪಾಧ್ಯಕ್ಷೆ ಎಂ.ಮಂಜುಳಗುಂಡಪ್ಪ, ನಿರ್ದೆಶಕರಾದ ಜೆ.ಎಂ.ವೆಂಕಟೇಶ್, ಜೆ.ವೆಂಕಟಾಪುರ ರಘುನಾಥ್, ಜೆ.ಎಂ.ಹನುಮಂತಪ್ಪ, ಜೆ.ಎನ್.ಶ್ರೀನಿವಾಸ್, ಕುಂಭಿಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಪಿ.ಆಂಜಿನಪ್ಪ, ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ಆರೀಫುಲ್ಲಾ ಆಸೀಪ್, ಜಂಗಮಕೋಟೆ ಎಸ್‌ಎಫ್‌ಸಿಎಸ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಕಾರಿ ಎಸ್.ನಾಗರಾಜ್, ಡಿಸಿಸಿ ಬ್ಯಾಂಕ್‌ನ ಶಿಡ್ಲಘಟ್ಟ ಶಾಖೆಯ ವ್ಯವಸ್ಥಾಪಕ ಆನಂದ್, ಹರೀಶ್, ಬ್ಯಾಂಕ್‌ನ ಸಿಬ್ಬಂದಿ ಹಾಜರಿದ್ದರು.
ಮುಂದಿನ ಏಪ್ರಿಲ್ ೧ರಿಂದ ಮಹಿಳಾ ಸ್ವ ಸಹಾಯ ಸಂಘಗಳಿಗೆ ೩ ಲಕ್ಷ ರೂವರೆಗಿನ ಸಾಲಕ್ಕೆ ಬಡ್ಡಿ ಇಲ್ಲದೆ ಸಾಲ ನೀಡಲಾಗುವುದು. ಇದುವರೆಗೂ ಸಾಲ ಪಡೆದುಕೊಂಡವರಿಗೆ ೩೩ ಪೈಸೆಯಷ್ಟು ಬಡ್ಡಿ ವಿಸಲಾಗುತ್ತಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ಸ್ತ್ರಿ ಶಕ್ತಿ ಸೇರಿದಂತೆ ಇತರೆ ಮಹಿಳಾ ಸ್ವ ಸಹಾಯ ಸಂಘಗಳಿಗೆ ೩ ಲಕ್ಷದವರೆಗಿನ ಸಾಲಕ್ಕೆ ಬಡ್ಡಿ ಇಲ್ಲದೆ ಸಾಲ ನೀಡಲಾಗುವುದು.
ಬಡ್ಡಿ ರಹಿತ ಸಾಲದ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಎಲ್ಲ ಮಹಿಳೆಯರು ಆರ್ಥಿಕವಾಗಿ ಸದೃಡರಾಗಿ ತಮ್ಮ ಕುಟುಂಬದ ಪೋಷಣೆಗೆ ಸಹಕರಿಸಿ ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಬೇಕು. ಆ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಸಾಗಬೇಕು ಎಂದು ಗೋವಿಂದೇಗೌಡ, ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ನುಡಿದರು.

error: Content is protected !!