ಹಿಂದುಳಿದಿರುವ ಶಿಡ್ಲಘಟ್ಟದ ಅಭಿವೃದ್ಧಿ ಹಾಗೂ ಸರ್ಕಾರದ ಸೌಲತ್ತುಗಳನ್ನು ಸಾಮಾನ್ಯ ಜನರಿಗೂ ತಲುಪಿಸುವಂತಹ ಪ್ರಾಮಾಣಿಕರಿಗೆ ಮತ ನೀಡುವ ಮೂಲಕ ಸಮರ್ಥರನ್ನು ಆಯ್ಕೆ ಮಾಡಿ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್‌ನ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ತಿಳಿಸಿದರು.
ನಗರದ ಬಸ್ ನಿಲ್ದಾಣದ ಸಮೀಪದ ಎಸ್.ಎನ್.ಕ್ರಿಯಾ ಟ್ರಸ್ಟ್‌ನ ಕಚೇರಿಯಲ್ಲಿ ಶನಿವಾರ ವೃದ್ಧರು, ಅಂಗವಿಕರು, ವಿಧವೆಯರಿಗೆ ಪಿಂಚಣಿ ಸೌಲಭ್ಯದ ಮಂಜೂರಾತಿ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವಿಭಾಜ್ಯ ಕೋಲಾರ ಜಿಲ್ಲೆಯಲ್ಲಿದ್ದಾಗಿನಿಂದ ಶಿಡ್ಲಘಟ್ಟ ಹೇಗಿತ್ತೊ, ಈಗಲೂ ಹಾಗೇಯೆ ಇದೆ, ಏನೂ ಬದಲಾವಣೆಯಾಗಿಲ್ಲ, ತಳಮಟ್ಟದ ಸಮುದಾಯಕ್ಕೆ ಸಿಗಬೇಕಾದಂತಹ ಸೌಲತ್ತುಗಳು ಸಿಕ್ಕಿಲ್ಲ, ನಿಜವಾದ ಫಲಾನುಭವಿಗಳಿಗೆ ಸಿಗಬೇಕಾಗಿದ್ದ ಸೌಲತ್ತುಗಳು, ನಾಯಕರ ಹಿಂಬಾಲಕರ ಪಾಲಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ, ಗ್ರಾಮೀಣ ಭಾಗದಲ್ಲಿನ ಜನರು ಪಡುತ್ತಿರುವ ಕಷ್ಟಗಳು ಕಣ್ಣಿಗೆ ಕಟ್ಟುತ್ತಿವೆ. ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಅವರಿಗೆ ಅರಿವೇ ಇಲ್ಲ, ಸತತವಾಗಿ ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಸುತ್ತಿದ್ದೇನೆ. ಇದೆಲ್ಲಾ ಸಮಸ್ಯೆಗಳು ಅರ್ಥವಾದ ನಂತರ ಹಳ್ಳಿ ಹಳ್ಳಿಗೂ ತೆರಳಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ಅವರ ನೋವಿನಲ್ಲಿ ಭಾಗಿಯಾಗಿದ್ದೇನೆ.
ನಾನು ಚುನಾವಣೆಗಾಗಿ ನಾಟಕವಾಡಲಿಕ್ಕಾಗಿ ಬಂದಿಲ್ಲ, ನಿಜವಾಗಲೂ ಜನರ ಸೇವೆ ಮಾಡಲಿಕ್ಕೆ ಬಂದಿದ್ದೇನೆ, ರಾಷ್ಟ್ರೀಯ ನಾಯಕರುಗಳ ಭಾವಚಿತ್ರಗಳನ್ನು ನೋಡಿ ಮತ ನೀಡಬೇಡಿ, ಸ್ಥಳೀಯವಾಗಿ ಕೆಲಸ ಮಾಡುವಂತಹ ವ್ಯಕ್ತಿಗಳನ್ನು ನೋಡಿ ಮತ ನೀಡಿ, ಇಷ್ಟು ವರ್ಷಗಳಲ್ಲಿ ನಾಯಕರ ಮಾತುಗಳಿಗೆ ಮರುಳಾಗಿದ್ದೀರಿ, ಹಣವನ್ನೂ ಕೊಟ್ಟು ಮತ ನೀಡಿದ್ದೀರಿ, ಯಾವ ಬದಲಾವಣೆಯನ್ನೂ ಕಂಡಿಲ್ಲ, ಇದೊಂದು ಬಾರಿ ನನಗೆ ಅವಕಾಶ ಮಾಡಿಕೊಡಿ, ಕೆಲಸ ಮಾಡಿದ್ದಾರೆ ಎನಿಸಿದರೆ, ಪುನಃ ಅವಕಾಶ ಮಾಡಿಕೊಡಿ ಎಂದರು.
ಮುಖಂಡ ಆನೂರು ದೇವರಾಜ್ ಮಾತನಾಡಿ, ತಾಲ್ಲೂಕಿನ ಜನತೆ ಬದಲಾವಣೆ ಬಯಸಿದ್ದಾರೆ, ಕ್ಷೇತ್ರದಲ್ಲಿ ನಾಲ್ಕು ವರ್ಷಗಳಿಂದ ಆರೋಗ್ಯ ತಪಾಸಣಾ ಶಿಬಿರಗಳು, ನೇತ್ರ ತಪಾಸಣಾ ಶಿಬಿರಗಳು, ಸೇರಿದಂತೆ ಪ್ರತಿಯೊಂದು ಹಳ್ಳಿಗೂ ಸಂಚರಿಸಿ, ಜನರ ಸೇವೆ ಮಾಡುತ್ತಿರುವ ಆಂಜಿನಪ್ಪ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಕ್ಷೇತ್ರದ ಜನತೆ ಅವರನ್ನು ಆಯ್ಕೆ ಮಾಡುವ ಕೆಲಸ ಮಾಡಬೇಕು ಎಂದರು.
ನೂರಾರು ಮಂದಿ ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರಿಗೆ ಸರ್ಕಾರದಿಂದ ನೀಡುವಂತಹ ಪಿಂಚಣಿ ಸೌಲಭ್ಯದ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಿದರು. ಹಿತ್ತಲಹಳ್ಳಿ ಕೃಷ್ಣಪ್ಪ, ತಿಮ್ಮಸಂದ್ರ ನರಸಿಂಹಪ್ಪ, ಮಳಮಾಚನಹಳ್ಳಿ ಭೈರೇಗೌಡ, ತುಮ್ಮನಹಳ್ಳಿ ವೆಂಕಟೇಶ್, ಅಪ್ಸರ್, ಎಸ್.ಎನ್.ಕ್ರಿಯಾ ಟ್ರಸ್ಟ್ ನ ಪದಾಧಿಕಾರಿಗಳು ಹಾಜರಿದ್ದರು.