Home News ಜಾನಪದ ಸಂಸ್ಕೃತಿ ಉಳಿಸಲು ಪ್ರತಿಭಾ ಕಾರಂಜಿ ಸಹಕಾರಿ

ಜಾನಪದ ಸಂಸ್ಕೃತಿ ಉಳಿಸಲು ಪ್ರತಿಭಾ ಕಾರಂಜಿ ಸಹಕಾರಿ

0

ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಿಂದ ಜಾನಪದ ಸಂಸ್ಕೃತಿ ಉಳಿಸಿಕೊಳ್ಳಬಹುದಾಗಿದೆ ಎಂದು ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ತಿಳಿಸಿದರು.
ತಾಲ್ಲೂಕಿನ ಎಚ್.ಕ್ರಾಸ್ ನಲ್ಲಿರುವ ಚನ್ನಮ್ಮದೇವೇಗೌಡ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಗಂಬೀರನಹಳ್ಳಿ ಕ್ಲಸ್ಟರ್ ಮಟ್ಟ’ದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಭಾ ಕಾರಂಜಿ ವೇದಿಕೆಯ ಮುಖ್ಯ ಉದ್ದೇಶ. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಪ್ರೊತ್ಸಾಹಿಸಿ, ಬೆಳೆಸುವಲ್ಲಿ ಶಿಕ್ಷಕರ ಶ್ರಮ ಮಹತ್ವದ್ದು. ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಗೆ ಸರ್ಕಾರ ನೀಡುತ್ತಿರುವ ಅನುದಾನ ಸ್ಥಗಿತಗೊಳಿಸಲು ಚಿಂತನೆ ನಡೆಸಿರುವುದು ಶೋಚನೀಯವಾದ ಸಂಗತಿಯಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಹೆಚ್ವಿನ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಕರು ದಿಕ್ಸೂಚಿಯಾಗಬೇಕು. ಮಕ್ಕಳ ಬೆಳವಣಿಗೆಯಲ್ಲಿ ಗುರಿ ಇರಲಿ ಆದರೆ ಒತ್ತಡದ ಶಿಕ್ಷಣ ಬೇಡ. ಮಕ್ಕಳ ಅಭಿರುಚಿಯನ್ನು ಪ್ರೋತ್ಸಾಹಿಸಿ ಎಂದರು, ಇಂತಹ ಕಾರ್ಯಕ್ರಮಗಳಿಗೆ ನೀಡುತ್ತಿರುವ ಅನುದಾನ ಏರಿಕೆ ಮಾಡಬೇಕು. ಜಾನಪದ, ಕಲೆ. ಸಾಹಿತ್ಯ, ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಕಾರ್ಯಗಳಿಗೆ ಸಾರ್ವಜನಿಕರು ಸಹ ಪ್ರೋತ್ಸಾಹ ನೀಡಬೇಕು. ಮಕ್ಕಳಲ್ಲಿರುವ ಪ್ರತಿಭೆಗಳು ಪ್ರಜ್ವಲಿಸಬೇಕು. ಕ್ಲಸ್ಟರ್ ಮಟ್ಟದಿಂದ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಗಬೇಕು. ಇದಕ್ಕೆ ಅಗತ್ಯವಾಗಿರುವ ಸಹಕಾರವನ್ನು ಕರ್ಣಶ್ರೀ ಚಾರಿಟೆಬಲ್ ಟ್ರಸ್ಟಿನ ಮೂಲಕ ಮಾಡುವುದಾಗಿ ಹೇಳಿದರು.

ಪ್ರತಿಭಾ ಕಾರಂಜಿಯಲ್ಲಿ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬಾಲಕ

ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಚ್.ಸುರೇಶ್ ಮಾತನಾಡಿ, ಮಕ್ಕಳು ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಸರ್ವತೋಮುಖ ಬೆಳವಣಿಗೆಯಾಗಲು ಪ್ರತಿಭಾ ಕಾರಂಜಿಯಂತಹ ಸ್ಪರ್ಧೆ, ವೇದಿಕೆ ಸಹಕಾರಿಯಾಗಿದೆ. ಪಠ್ಯದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಆತ್ಮಸ್ಥೈರ್ಯ ಹೆಚ್ಚಾಗುವ ಜತೆಗೆ ನಾಯಕತ್ವ ಗುಣ ಬೆಳೆಯಲು ಸಾಧ್ಯ. ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದ್ದು ಇಂತಹ ವೇದಿಕೆಗಳನ್ನು ಮಕ್ಕಳು ಉಪಯೋಗ ಮಾಡಿಕೊಂಡು ಉತ್ತಮ ಪ್ರದರ್ಶನ ನೀಡಬೇಕು ಎಂದರು.
ಸ್ಥಳೀಯ ಮುಖಂಡ ರವಿಕುಮಾರ್ ಮಾತನಾಡಿ, ಪ್ರತಿಭೆ ಪ್ರತಿಯೊಂದು ಮಗುವಿನಲ್ಲಿಯೂ ಇರುತ್ತದೆ. ಅದನ್ನು ಗುರುತಿಸುವ ಶಿಕ್ಷಕರು, ಪಾಲಕರಿಂದ ಕಾರ್ಯ ಆಗಬೇಕು. ಕೆಲವೊಂದು ಮಕ್ಕಳು ಆರ್ಥಿಕವಾಗಿ ಹಾಗೂ ಸಾಮಾಜಿಕ ಹಿನ್ನಡೆಯಿಂದ ಅವಕಾಶ ವಂಚಿತರಾಗಿರುತ್ತಾರೆ. ಇಂತಹ ಮಕ್ಕಳನ್ನು ಶಿಕ್ಷಕರು ಗುರುತಿಸುವ ಜತೆಗೆ ಉತ್ತಮ ಮಾರ್ಗದರ್ಶನ ನೀಡಿದರೆ ಸಮಾಜದಲ್ಲಿ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯ. ಕ್ಲಸ್ಟರ್ ಮಟ್ಟದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಾಲಿಬಾಲ್ ಕೊಡಿಸುವುದಾಗಿ ಅವರು ಭರವಸೆ ನೀಡಿದರು.
ಕ್ಲಸ್ಟರ್ ಮಟ್ಟದ ಶಾಲೆಗಳ ಮಕ್ಕಳು ವಿವಿಧ ಬಗೆಯ ವೇಷಭೂಷಣಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ಕೋಲಾಟ ಪ್ರದರ್ಶನ ನಡೆಯಿತು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಆಂಜಿನಪ್ಪ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಯನಾ, ಕಾರ್ಯದರ್ಶಿ ಶಂಕರಪ್ಪ, ಶಾರದಮ್ಮ, ಸಿಕಂದರ್ ಪಾಷ, ಸಿದ್ದಲಿಂಗಪ್ಪ, ರಮೇಶ್, ಮುನಿರಾಜ್ ಕುಟ್ಟಿ ಹಾಜರಿದ್ದರು.
 

error: Content is protected !!