ವಿಶ್ವ ಶಾಂತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದಿಂದ ಸಾಮೂಹಿಕವಾಗಿ ರಾಜಯೋಗ ಧ್ಯಾನವನ್ನು ನಡೆಸಲಾಯಿತು.
ಚಿಂತಾಮಣಿ ರಸ್ತೆಯಲ್ಲಿರುವ ವೀರಾಪುರದ ಗವಿಗಂಗಾಧರೇಶ್ವರ ದೇವಾಲಯದ ಗುಟ್ಟದಲ್ಲಿ ಭಾನುವಾರ ನೆರೆದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸದಸ್ಯರು ೩ ಗಂಟೆಗಳಿಗೂ ಹೆಚ್ಚು ಕಾಲ ಸಾಮೂಹಿಕವಾಗಿ ರಾಜಯೋಗ ಧ್ಯಾನವನ್ನು ಮಾಡಿದರು.
ಇತ್ತೀಚೆಗೆ ನಡೆದ ನೇಪಾಳದ ಭೂಕಂಪದಲ್ಲಿ ಮಡಿದ ಸಾವಿರಾರು ಮಂದಿ ಸಹೋದರರ, ಸಹೋದರಿಯರು ಸೇರಿದಂತೆ ಎಲ್ಲರ ಆತ್ಮಕ್ಕೂ ಶಾಂತಿ, ಮೋಕ್ಷ ದೊರಕಲೆಂದು ಈ ಯೋಗ ಧ್ಯಾನವನ್ನು ನಡೆಸುತ್ತಿದ್ದೇವೆ ಎಂದು ಬ್ರಹ್ಮಕುಮಾರಿಯ ಜಯಕ್ಕ ತಿಳಿಸಿದರು.
ಕಾಲ ಕಾಲಕ್ಕೆ ಮಳೆ ಬೆಳೆ ಆಗುತ್ತಿಲ್ಲ. ಇದಲ್ಲದೆ ಜನರಲ್ಲಿ ದುರಾಸೆ ನೆಲೆಸಿ ಶಾಂತಿ, ನೆಮ್ಮದಿ, ಆರೋಗ್ಯ ಇಲ್ಲದಾಗಿದೆ. ಹಾಗಾಗಿ ಎಲ್ಲೆಲ್ಲೂ ಅಶಾಂತಿಯೆ ನೆಲೆಸಿದೆ. ಆದ್ದರಿಂದ ಈ ಲೋಕದಲ್ಲಿ ಸುಖ ಶಾಂತಿ ನೆಮ್ಮದಿಯೂ ನೆಲೆಸಲೆಂಬುದು ಈ ಧ್ಯಾನದ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.
ಶಿಡ್ಲಘಟ, ಮೇಲೂರು, ಮಳ್ಳೂರು ಶಾಖೆಗಳಿಂದ ವಿದ್ಯಾರ್ಥಿಗಳಲ್ಲದೆ ಇತರರೂ ಈ ಸಾಮೂಹಿಕ ಯೋಗ ಧ್ಯಾನದಲ್ಲಿ ಭಾಗವಹಿಸಿದ್ದರು. ಧ್ಯಾನದ ನಂತರ ಸಾಮೂಹಿಕ ಪ್ರಾರ್ಥನೆ ಹಾಗೂ ಭೋಜನ ಕಾರ್ಯಕ್ರಮವೂ ನಡೆಯಿತು.
ಮಂಜನಾಥ್, ಚಂದ್ರಶೇಖರ್, ಪಿಳ್ಳವೆಂಕಟಸ್ವಾಮಿ, ನಾರಾಯಣಸ್ವಾಮಿ, ಮುನಿರೆಡ್ಡಿ, ಅರುಣ್ಕುಮಾರ್, ಅಮರ್, ದೇವಿಕಾ ಮತ್ತಿತರರು ಧ್ಯಾನದಲ್ಲಿ ಭಾಗವಹಿಸಿದ್ದರು.