ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಶಿಡ್ಲಘಟ್ಟ ರೇಷ್ಮೆಗೆ ಮನಸೋತಿರುವ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಅವರು ಮಹಾರಾಷ್ಟ್ರದ ತಮ್ಮ ಊರು ಪುಣೆಯಿಂದ ಆಸಕ್ತರನ್ನು ಕರೆ ತಂದು ಶುಕ್ರವಾರ ಚಿಟ್ಟೆಯಿಂದ ಬಟ್ಟೆಯವರೆಗೂ ವಿವಿಧ ಹಂತಗಳ ರೇಷ್ಮೆ ಕೆಲಸವನ್ನು ತೋರಿಸಿ ವಿವರಿಸಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಗೆ ಬೇಟಿ ನೀಡಿದ್ದ ಅವರು, ಗೂಡಿನ ಗುಣಮಟ್ಟ, ಇ ಹರಾಜು ಪ್ರಕ್ರಿಯೆ, ಸೇರಿದಂತೆ ಮಾರುಕಟ್ಟೆಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು.
ನಂತರ ಬೈಪಾಸ್ ರಸ್ತೆಯಲ್ಲಿರುವ ನಾರಾಯಣಪ್ಪ ಎಂಬುವರ ನೂಲು ಬಿಚ್ಚಾಣಿಕೆ ಕೇಂದ್ರಕ್ಕೆ ಬೇಟಿ ನೀಡಿದ್ದ ಅವರು, ಗೂಡಿನಿಂದ ನೂಲು ಬಿಚ್ಚಾಣಿಕೆ ಮಾಡುವುದು, ನೂಲು ಬಿಚ್ಚಾಣಿಕೆ ಆದ ನಂತರ ಮಾರುಕಟ್ಟೆಯ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು. ರೇಷ್ಮೆನೂಲು ಬಿಚಾಣಿಕೆ ಮಾಡುತ್ತಿರುವ ಕಾರ್ಮಿಕರಿಗೆ ಒದಗಿಸುತ್ತಿರುವ ಸವಲತ್ತುಗಳ ಬಗ್ಗೆ ರೀಲರುಗಳಿಂದ ಮಾಹಿತಿ ಪಡೆದುಕೊಂಡರು. ಸರ್ಕಾರದಿಂದ ರೀಲರುಗಳಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ನಂತರ ಬೆಳ್ಳೂಟಿ ರೇಷ್ಮೆಮೊಟ್ಟೆ ಉತ್ಪಾದನಾ ಘಟಕಕ್ಕೆ ಬೇಟಿ ನೀಡಿ ಮೊಟ್ಟೆ ಉತ್ಪಾದನೆಯ ಬಗ್ಗೆ ಮಾಹಿತಿ ಪಡೆದ ನಂತರ ಬೋದಗೂರು ಗ್ರಾಮಕ್ಕೆ ತೆರಳಿದ ಅವರು, ಗ್ರೇನೆಜ್‌ಗೆ ಬೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಕುರಿತು ತಿಳಿದುಕೊಂಡರು. ರೇಷ್ಮೆಹುಳು ಸಾಕಾಣಿಕೆ, ಹುಳು ಮನೆಯ ನಿರ್ಮಾಣ, ಹಿಪ್ಪುನೇರಳೆ ತೋಟಗಳ ನಿರ್ವಹಣೆ, ಸೇರಿದಂತೆ ರೈತರಿಂದ ಅನೇಕ ಮಾಹಿತಿಗಳನ್ನು ಪಡೆದುಕೊಂಡರು.
ರೀಲರುಗಳು ರೇಷ್ಮೆಗೂಡಿನಿಂದ ತಯಾರು ಮಾಡಿದ ಹಾರವನ್ನು ನೀಡಿ ಜಿಲ್ಲಾಧಿಕಾರಿಯವರನ್ನು ಗೌರವಿಸಿದರು.
ಚಿಕ್ಕಬಳ್ಳಾಪುರ ರೇಷ್ಮೆ ಇಲಾಖೆ ಉಪನಿರ್ದೇಶಕ ನಾಗಭೂಷಣ್, ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ವೆಂಕಟೇಶಪ್ಪ, ರೀಲರುಗಳಾದ ನಾರಾಯಣಪ್ಪ, ರಾಮಕೃಷ್ಣಪ್ಪ ಮುಂತಾದವರು ಹಾಜರಿದ್ದರು.