Home News ಜಿಲ್ಲಾ ಪಂಚಾಯಿತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಅಗತ್ಯ ನೆರವು

ಜಿಲ್ಲಾ ಪಂಚಾಯಿತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಅಗತ್ಯ ನೆರವು

0

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲಭೂತ ಸವಲತ್ತುಗಳನ್ನು ಒದಗಿಸಲು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶನಿವಾರ ಧಿಡೀರ್ ಭೇಟಿ ನೀಡಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿಯಿಂದ ಕಾಲೇಜಿನಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು.
ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಶಿಡ್ಲಘಟ್ಟ ಉಪ ವಿಭಾಗದ ವತಿಯಿಂದ ಸುಮಾರು ೬೨ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ನೂತನ ಕಟ್ಟಡದಲ್ಲಿ ಸುಮಾರು ೪೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಹುತೇಕ ಗ್ರಾಮೀಣ ಪ್ರದೇಶದಿಂದಲೇ ಬರುವ ಅರ್ಧಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಪರದಾಡುವ ಪರಿಸ್ಥಿತಿಯಿದೆ. ಬಾಲಕರಿಗೆ ಕಾಲೇಜಿನ ಕಾಂಪೊಂಡ್ನ ಗೋಡೆಯೆ ಶೌಚಾಲಯವಾಗಿ ಪರಿಣಮಿಸಿದೆ.
ಕಾಲೇಜು ಕಟ್ಟಡ ನಿರ್ಮಾಣದೊಂದಿಗೆ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಶೌಚಾಲಯಗಳನ್ನು ನಿರ್ಮಿಸಲಾಗಿತ್ತಾದರೂ ಶೌಚಾಲಯಕ್ಕೆ ಸೂಕ್ತ ನೀರಿನ ಸಂಪರ್ಕ ಇಲ್ಲದಿರುವುದರಿಂದ ಶೌಚಾಲಯಗಳನ್ನು ಬಳಕೆಗೆ ಬಿಡದೆ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ.
೨೦೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ವಿದ್ಯಾರ್ಥಿನಿಯರ ಪಾಡು ಮಾತ್ರ ಹೇಳತೀರದು. ಕೆಲ ವಿದ್ಯಾರ್ಥಿನಿಯರು ಕಾಲೇಜಿನ ಸಮೀಪವಿರುವ ಸರ್ಕಾರಿ ಪ್ರೌಢಶಾಲೆಯಲ್ಲಿನ ಶೌಚಾಲಯದಲ್ಲೂ ನೀರಿನ ಸಮಸ್ಯೆಯೇ. ಅಲ್ಲಿಯೂ ಶೌಚಾಲಯಕ್ಕೆ ಬೀಗ ಜಡಿಯಲಾಗಿರುತ್ತದೆ. ಇದರಿಂದಾಗಿ ಸಂಜೆ ಕಾಲೇಜು ಮುಗಿಸಿಕೊಂಡು ತಮ್ಮ ತಮ್ಮ ಗ್ರಾಮಗಳಿಗೆ ಹೋಗುವ ತನಕ ಉಸಿರು ಬಿಗಿಹಿಡಿದುಕೊಳ್ಳುವ ಅನಿವಾರ್ಯ ಪರಿಸ್ಥಿತಿಯಲ್ಲಿ ಇಲ್ಲಿನ ವಿದ್ಯಾರ್ಥಿನಿಯರಿದ್ದಾರೆ.
ಕಾಲೇಜು ಮುಗಿದ ಮೇಲೆ ಸಂಜೆಯ ವೇಳೆ ಕಿಡಿಗೇಡಿಗಳು ಕಾಲೇಜು ಆವರಣದೊಳಕ್ಕೆ ಬಂದು ಇಲ್ಲಿ ಬೀಡಿ, ಸಿಗರೇಟ್, ಮದ್ಯ ಸೇವನೆಯಂತಹವನ್ನು ಮಾಡಿ ಬಾಟಲ್ಗಳನ್ನು ಅಲ್ಲೇ ಎಸೆದುಹೋಗಿರುತ್ತಾರೆ. ಪ್ರತಿನಿತ್ಯ ಬೆಳಗ್ಗೆ ಕಾಲೇಜಿಗೆ ಬರುವ ನಮಗೆ ಇವನ್ನೆಲ್ಲಾ ನೋಡಿ ಕಿರಿ ಕಿರಿಯಾಗುತ್ತದೆ.
ಕಾಲೇಜು ಕಟ್ಟಡಕ್ಕೆ ರಾತ್ರಿ ಪಾಳಿಯ ಕಾವಲುಗಾರನನ್ನು ನೇಮಿಸುವ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗು ನಗರಸಭೆಯಿಂದ ಕಾಲೇಜಿನಲ್ಲಿರುವ ಸಂಪಿಗೆ ನೀರಿನ ಸಂಪರ್ಕ ಕೊಡಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪದ್ಮರಾಜ್, ಕಾಲೇಜು ಉಪನ್ಯಾಸಕರಾದ ಲಕ್ಷ್ಮಣ್, ಮುನಿರಾಜು, ಎಬಿವಿಪಿ ನರೇಶ್ ಹಾಜರಿದ್ದರು.