ಶಿಡ್ಲಘಟ್ಟದಲ್ಲಿ ಪ್ರಪ್ರಥಮವಾಗಿ ಜಿಲ್ಲಾ ಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯನ್ನು ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ತಾಲ್ಲೂಕಿನ ಹಲವಾರು ಸ್ಕೇಟಿಂಗ್ ಪ್ರತಿಭೆಗಳು ರಾಜ್ಯಮಟ್ಟದಲ್ಲಿ ಭಾಗವಹಿಸುವರು ಎಂದು ದಿವ್ಯ ಭಾರತ್ ಕರಾಟೆ ಡೋ ಅಸೋಶಿಯೇಷನ್ ನ ಅರುಣ್ ಕುಮಾರ್ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ದಿವ್ಯ ಭಾರತ್ ಕರಾಟೆ ಡೋ ಅಸೋಶಿಯೇಷನ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಚಾಂಪಿಯನ್ಶಿಪ್ ಸ್ವರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲ್ಯದಿಂದ ಮಕ್ಕಳಿಗೆ ಕ್ರೀಡಾಕೂಟಗಳಲ್ಲಿ ಆಸಕ್ತಿ ಬೆಳೆಸುವುದರಿಂದ ದೊಡ್ಡವರಾದ ಮೇಲೆ ಉತ್ತಮ ಕ್ರೀಡಾಪಟುಗಳಾಗಿ ರಾಜ್ಯ ಮತ್ತು ರಾಷ್ಟ್ರಕ್ಕೆ ಕೀರ್ತಿ ತರುವುದರಲ್ಲಿ ಯಾವುದೇ ಸಂದೇಹವಿಲ್ಲ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೇಹಕ್ಕೆ ವ್ಯಾಯಾಮ ದೊರೆಯುವುದರ ಜೊತೆಗೆ ಆರೋಗ್ಯವಂತರಾಗಿ ಮನಸ್ಸು ಉಲ್ಲಸಿತವಾಗಿರುತ್ತದೆ.
೫ ರಿಂದ ೧೩ ವರ್ಷಗಳ ಮಕ್ಕಳಿಗೆ ೫೦೦,೧೦೦೦,೧೫೦೦ ಮೀಟರ್ ಸ್ಕೇಟಿಂಗ್ ಸ್ಪರ್ಧೆಯನ್ನು ಎರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಮೂರು ತಾಲ್ಲೂಕಿನಿಂದ ಸುಮಾರು ೪೦ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲನೆ, ದ್ವಿತೀಯ, ತೃತೀಯ ಬಹುಮಾನ ವಿತರಣೆ ಮಾಡಲಾಯಿತು.
ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದೆಂದು ಈ ಸಂದರ್ಭದಲ್ಲಿ ಅರುಣ್ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸ್ಕೇಟಿಂಗ್ ಸ್ಪರ್ಧೆಯಲ್ಲಿ ವಿವಿಧ ಚಾಕಚಕ್ಯತೆಯನ್ನು ಪ್ರದರ್ಶಿಸಿದ್ದು, ನೋಡುಗರ ಮೆಚ್ಚುಗೆ ಗಳಿಸಿತ್ತು.
ಈ ಸಂದರ್ಭದಲ್ಲಿ ಮುನಾವರ್, ಮುನಿರಾಜು, ನಿರಂಜನ್, ಜನಾರ್ದನ್, ಅನ್ಸರ್ ಖಾನ್, ಅರವಿಂದ್, ಚೆನ್ನಕೃಷ್ಣಪ್ಪ, ರಾಜಕುಮಾರ್, ಅಬ್ದುಲ್ ಗಫೂರ್, ಅಮ್ಜದ್ ಖಾನ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -