ನಗರದ ನೆಹರೂ ಕ್ರೀಡಾಂಗಣದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಮಂಗಳವಾರ ‘ಕ್ರೀಡೆ ಆಡಿ ಮತದಾನ ಮಾಡಿ’ ಎಂಬ ತಾಲ್ಲೂಕು ಮಟ್ಟದ ಪುರುಷರ ಕಬಡ್ಡಿ ಹಾಗೂ ಮಹಿಳೆಯರ ಥ್ರೋ ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ಮುಂದಿನ ಐದು ವರ್ಷಗಳು ಹೇಗಿರಬೇಕೆಂದು ನಿರ್ಧರಿಸುವಂತಹ ಅತ್ಯಂತ ಪ್ರಮುಖ ಜವಾಬ್ದಾರಿಯನ್ನು ಮತದಾನದ ಮೂಲಕ ನಿರ್ವಹಿಸುತ್ತಾರೆ. ಪ್ರತಿ ಮತ ಅತ್ಯಮೂಲ್ಯ. ಮತದಾರರಾದ ಕ್ರೀಡಾಪಟುಗಳು ಚುನಾವಣೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಅರಿತು, ತಮ್ಮ ಮನೆಯವರು, ಸುತ್ತಮುತ್ತಲಿನವರಲ್ಲಿ ಅರಿವು ಮೂಡಿಸಬೇಕು. ತಾಲ್ಲೂಕಿನಲ್ಲಿ ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾಪಟುಗಳು ಹೆಚ್ಚಾಗಿದ್ದಾರೆ. ಮೇ 12 ರಂದು ನಡೆಯಲಿರುವ ವಿದಾನಸಭಾ ಚುನಾವಣೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲು ಎಲ್ಲರೂ ನೆರವಾಗಬೇಕು ಎಂದು ಹೇಳಿದರು.
ಮಹಿಳೆಯರ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಜಿಎಫ್‌ಜಿಸಿ ಮಹಿಳಾ ತಂಡಕ್ಕೆ ಪ್ರಥಮ ಬಹುಮಾನ ಹಾಗೂ ಧರಣಿ ಮಹಿಳಾ ತಂಡಕ್ಕೆ ದ್ವಿತೀಯ ಬಹುಮಾನ ಲಭಿಸಿತು. ಕನ್ನಪನ್ನಹಳ್ಳಿ ಸುಭಾಷ್ ಚಂದ್ರ ಬೋಸ್ ಕಬಡ್ಡಿ ತಂಡಕ್ಕೆ ಪ್ರಥಮ ಮತ್ತು ಮಾತೃ ಭೂಮಿ ಯುವಕರ ಸಂಘಕ್ಕೆ ದ್ವಿತೀಯ ಬಹುಮಾನ ವಿತರಣೆ ಮಾಡಲಾಯಿತು.
ಅಪ್ಪೇಗೌಡನಹಳ್ಳಿ ಶ್ರೀರಾಮ ಯುವಕರ ಸಂಘದ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಹಾಕಿ ತಂಡದ ತರಬೇತುದಾರ ಮುಷ್ಟಾಕ್ ಅಹಮ್ಮದ್, ರಂಗನಾಥ್, ತ್ಯಾಗರಾಜು, ಅಗಜಾನನಮೂರ್ತಿ, ಚಂದ್ರಕಲಾ, ದಾಕ್ಷಾಯಿಣಿ, ಶ್ರೀಹರಿ, ರಾಮಚಂದ್ರಪ್ಪ, ಶ್ರೀನಿವಾಸ್ ಹಾಜರಿದ್ದರು.