Home News ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಶಾಖೆಯಲ್ಲಿ ಆರ್.ಟಿ.ಜಿ.ಎಸ್ ಸೇವೆಯ ಉದ್ಘಾಟನೆ

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಶಾಖೆಯಲ್ಲಿ ಆರ್.ಟಿ.ಜಿ.ಎಸ್ ಸೇವೆಯ ಉದ್ಘಾಟನೆ

0

ಪಟ್ಟಣದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಶಾಖೆಯಲ್ಲಿ ಮಂಗಳವಾರ ಆರ್.ಟಿ.ಜಿ.ಎಸ್ ಸೇವೆಯ ಉದ್ಘಾಟನೆಯನ್ನು ಮಾಡಲಾಯಿತು.
ಆನ್‌ಲೈನ್‌ ಸೇವೆಯ ಉದ್ಘಾಟನೆಯನ್ನು ಮಾಡಿದ ಶಾಸಕ ಎಂ.ರಾಜಣ್ಣ ಮಾತನಾಡಿ, ‘ರಾಷ್ಟ್ರೀಕೃತ ಬ್ಯಾಂಕುಗಳ ನೀಡುವ ಎಲ್ಲಾ ಸೇವೆಗಳನ್ನೂ ಈಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲೂ ಒದಗಿಸಲಾಗುತ್ತಿದೆ. ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು, ರೈತರು ಹೊಸ ಸೇವೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಬ್ಯಾಂಕ್‌ ಅಭಿವೃದ್ಧಿಯಾಗಬೇಕಾದರೆ ತೆಗೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು.ಶೀಘ್ರ ಹಣ ವರ್ಗಾವಣೆ, ಸಮಯದ ಉಳಿತಾಯ ಹಾಗೂ ಕಡಿಮೆ ಬಡ್ಡಿ ಹಣ ಮುಂತಾದ ಸೇವೆಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರವನ್ನು ಬಲಗೊಳಿಸಬೇಕು’ ಎಂದು ಹೇಳಿದರು.
‘ಇದುವರೆಗೂ ಸಹಕಾರಿ ಬ್ಯಾಂಕುಗಳಿಗೆ ಈ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಂತೆ ಐ.ಎಫ್‌.ಎಸ್‌.ಸಿ ಕೋಡ್‌ ಇರಲಿಲ್ಲ. ಈಗ ಪ್ರಪ್ರಥಮವಾಗಿ ಈ ಕೋಡ್‌ ಪಡೆದ ಹೆಗ್ಗಳಿಕೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ಸಲ್ಲುತ್ತದೆ. ಇದರಿಂದ ವರ್ತಕರಿಗೆ, ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಸ್ವಸಹಾಯ ಗುಂಪುಗಳು ಸಾಲ ಹಿಂತಿರುಗಿಸುವಲ್ಲಿ ಪ್ರಥಮರಾಗಿದ್ದು ಮಾದರಿಯಾಗಿದ್ದಾರೆ’ ಎಂದು ಅವರು ಹೇಳಿದರು.
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿರ್ದೇಶಕರಾದ ಪಿ.ವಿ.ನಾಗರಾಜ್‌, ಶಿವಾರೆಡ್ಡಿ, ಕೆ.ಎಂ.ಎಫ್‌ ನಿರ್ದೇಶಕ ಬಂಕ್‌ ಮುನಿಯಪ್ಪ, ಬ್ಯಾಂಕ್‌ ವ್ಯವಸ್ಥಾಪಕ ಲಿಂಗರಾಜು, ಎಸ್‌.ಎಫ್‌.ಸಿ.ಎಸ್‌ ಕಾರ್ಯನಿರ್ವಾಹಣಾಧಿಕಾರಿ ನಾಗರಾಜ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.