ಬರ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಕೃಷಿ ಸಚಿವ ಕೃಷ್ಣ ಬೈರೇಗೌಡ ಸೋಮವಾರ ತಾಲ್ಲೂಕಿನ ಹೊಸಪೇಟೆ ಪಂಚಾಯತಿಯ ಘಟಮಾರನಹಳ್ಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹೊಸಕೋಟೆಯ ಮೂಲಕ ಕೋಲಾರ ಜಿಲ್ಲೆಯ ಭೇಟಿಯನ್ನು ಮುಗಿಸಿ ತಾಲ್ಲೂಕಿನ ಮೂಲಕ ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸಿ ಚಿಕ್ಕಬಳ್ಳಾಪುರದ ಕಡೆಗೆ ತೆರಳಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ತಾಲ್ಲೂಕು ಪಂಚಾಯತಿ, ಪುರಸಭೆ ಹಾಗೂ ರೈತ ಸಂಘದವರಿಂದ ಮನವಿಯನ್ನು ಸ್ವೀಕರಿಸಿ ಮಾತನಾಡಿ, ‘ಜಿಲ್ಲೆಯು ಸಾಕಷ್ಟು ತೀವ್ರ ಬರವನ್ನು ಎದುರಿಸುತ್ತಿದೆ. ಈಗಾಗಲೇ ಅಂತರ್ಜಲ ಕುಸಿದು ಹುಲ್ಲೂ ಬೆಳೆಯದ ಸ್ಥಿತಿಯಲ್ಲಿದೆ. ಮಾವೂ ಒಣಗಿದೆ. ಅನೇಕ ಕಡೆ ಮೊಳಕೆಯಾಗಿಯೇ ಇಲ್ಲ. ಕೆಲವೆಡೆ ಮೊಳಕೆಯಾಗಿದ್ದರೂ ಒಣಗಿವೆ. ಎರಡನೇ ಬಿತ್ತನೂ ಒಣಗಿದ ನಿದರ್ಶನಗಳಿವೆ. ಶೇಕಡಾ 70 ರಿಂ 80 ರಷ್ಟು ಬೆಳೆ ನಷ್ಟವಾಗಿದೆ. ಜಾನುವಾರುಗಳಿಗೆ ನೀರಿಲ್ಲ, ಮೇವಿಲ್ಲದಂಥ ಪರಿಸ್ಥಿತಿಯಿದೆ.
ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಜಿಲ್ಲಾಧಿಕಾರಿಗಳು ಎಲ್ಲರೂ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಮುಖ್ಯಮಂತ್ರಿಗಳಿಗೆ ಸಮಗ್ರ ವರದಿಯನ್ನು ನೀಡಿ ತೀವ್ರ ಬರಗಾಲದ ಚಿತ್ರಣವನ್ನು ನೀಡುತ್ತೇವೆ. ಈ ವಾರದ ಸಂಪುಟದ ಸಭೆಯಲ್ಲಿ ಬರದ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಯಾವ ರೀತಿಯ ಪರಿಹಾರ ನೀಡಬೇಕು ಹೇಗೆ ನೀಡಬೇಕೆಂಬುದನ್ನೂ ಚರ್ಚಿಸಲಿದ್ದೇವೆ. ಪರಿಹಾರ ಎಷ್ಟೇ ನೀಡಿದರೂ ಅದು ನಷ್ಟಕ್ಕೆ ಸಮನಾದುದಲ್ಲ. ಆದರೂ ಸರ್ಕಾರದ ಕಡೆಯಿಂದ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಜಾನುವಾರುಗಳ ಮೇವನ್ನು ಇತರ ಜಿಲ್ಲೆಗಳಿಂದ ತರಿಸುವ ಉದ್ದೇಶವೂ ಇದೆ. ಜಿಲ್ಲೆಯ ನೀರಿನ ಸಮಸ್ಯೆಯನ್ನು ಪರಿಹರಿಸಲು ದೂರಗಾಮಿ ಯೋಜನೆಗಳಾದ ಎತ್ತಿನ ಹೊಳೆ ಹಾಗೂ ಬೆಂಗಳೂರಿನಿಂದ ವರ್ತೂರು ಕೆರೆಗೆ ಹೋಗುವ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗೆ ಹರಿಸುವ ಕೆಲಸಗಳೂ ಜಾರಿಯಲ್ಲಿವೆ’ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ,‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗುತ್ತಿದೆ. ಜನರು ಕಷ್ಟದಲ್ಲಿದ್ದಾರೆ. ಜಿಲ್ಲೆಯ ಮಗನಾಗಿರುವ ಕೃಷಿ ಸಚಿವರು ವಾಸ್ತವ ಸ್ಥಿತಿಯನ್ನು ಮುಖ್ಯಮಂತ್ರಿಗಳಿಗೆ ವರದಿ ನೀಡಿ ರೈತರ ಸಂಕಷ್ಟ ಮತ್ತು ಜಾನುವಾರುಗಳ ಮೇವಿನ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು’ ಎಂದು ನುಡಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೇಶವರೆಡ್ಡಿ, ಉಪಾಧ್ಯಕ್ಷೆ ವೀಣಾ ಗಂಗುಲಪ್ಪ, ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಸತೀಶ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಕೋಚಿಮುಲ್ ಮಾಜಿ ಅಧ್ಯಕ್ಷ ಗುಡಿಯಪ್ಪ, ಪುರಸಭಾ ಸದಸ್ಯರಾದ ಬಾಲಕೃಷ್ಣ, ಚಿಕ್ಕಮುನಿಯಪ್ಪ, ಸುಬ್ರಮಣಿ, ಎನ್.ಮುನಿಯಪ್ಪ, ಮುನೇಗೌಡ, ಸುರೇಶ್, ಗೋಪಾಲ್, ಲಕ್ಷ್ಮೀನಾರಾಯಣ, ಬ್ಯಾಟರಾಯಶೆಟ್ಟಿ, ಎಚ್.ಎಂ.ಮುನಿಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.