Home News ಜೀವನಪ್ರೀತಿ, ಸಮಾಜಮುಖಿ ಗುಣಗಳನ್ನು ಯುವಜನರು ರೂಢಿಸಿಕೊಳ್ಳಬೇಕು

ಜೀವನಪ್ರೀತಿ, ಸಮಾಜಮುಖಿ ಗುಣಗಳನ್ನು ಯುವಜನರು ರೂಢಿಸಿಕೊಳ್ಳಬೇಕು

0

ಯುವಕರಿಗೆ ಉತ್ತಮ ಮಾರ್ಗದರ್ಶನ ಸಿಗಬೇಕು. ಜೀವನಪ್ರೀತಿ, ಸಮಾಜಮುಖಿ ಗುಣಗಳನ್ನು ಯುವಜನರು ರೂಢಿಸಿಕೊಂಡಾಗ ಮಾತ್ರ ಸಮಾಜದಲ್ಲಿನ ಭ್ರಷ್ಟತೆಗೆ ಕಡಿವಾಣ ಬೀಳುತ್ತದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಸೋಮವಾರ ಕನ್ನಡ ಸಾರಸ್ವತ ಪರಿಚಾರಿಕೆ(ಕಸಾಪ) ವತಿಯಿಂದ ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಉದ್ದೇಶ ಇತರೇ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದಾಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಷ್ಟೇ ಅಲ್ಲದೆ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, ಕನ್ನಡ ಶಿಕ್ಷಕರು, ಸರ್ಕಾರಿ ಶಾಲೆ ಮತ್ತು ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿದ್ದು ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನೂ ಸಹ ಪುರಸ್ಕರಿಸಲಾಗುತ್ತಿದೆ. ಗ್ರಾಮಾಂತರ ಪ್ರತಿಭೆಗಳಿಗೆ, ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉತ್ತೇಜನ ನೀಡುವ ಉದ್ದೇಶ ಸಫಲವಾಗಲಿ. ಈ ಬಾರಿ ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು 27 ವಿದ್ಯಾರ್ಥಿಗಳು ಪಡೆದಿರುವುದು ಅಭಿನಂದನೀಯ. ಈ ಸಂಖ್ಯೆ ಇನ್ನೂ ಹೆಚ್ಚಾಗಲಿ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅಂತಾರಾಷ್ಟ್ರೀಯ ವಿದ್ಯಾರ್ಥಿ ಮಾರ್ಗದರ್ಶಿ ಸಂಜೀವ್‌ ಕುಮಾರ್‌ ಮಾತನಾಡಿ, ಅಂಕಗಳಷ್ಟೇ ಗಳಿಸಿದರೆ ಸಾಲದು, ವ್ಯಕ್ತಿತ್ವ, ಕೌಶಲ್ಯ ವೃದ್ಧಿಸಿಕೊಳ್ಳಬೇಕು. ಓದುವಾಗಲೇ ಅನಬುಭವಕ್ಕಾಗಿ ದುಡಿಯುವ ಪ್ರವೃತ್ತಿ ಬೆಳೆಯಬೇಕು. ಅಂಕಗಳು ಸಂದರ್ಶಕರ ಕೊಠಡಿಯವರೆಗೆ ಕರೆದೊಯ್ಯಬಲ್ಲದು. ಆದರೆ ನಿಮ್ಮಲ್ಲಿನ ಕೌಶಲ್ಯ, ಅನುಭವ ಉದ್ಯೋಗ ಸಿಗಲು ಸಹಾಯಕವಾಗುತ್ತದೆ. ಕೇವಲ ಪುಸ್ತಕ ಹುಳುಗಳಾಗದಿರಿ. ವಿವಿಧ ಹವ್ಯಾಸ ಅಭಿರುಚಿಗಳು ನಿಮ್ಮದಾಗಲಿ. ಸಂಪರ್ಕ ಕ್ರಾಂತಿಯ ಯುಗದಲ್ಲಿ ಸ್ಮಾರ್ಟ್‌ ಫೋನ್‌ಗಳು ಮನರಂಜನೆಗಷ್ಟೇ ಅಲ್ಲದೆ ಭವಿಷ್ಯ ರೂಪಿಸಿಕೊಳ್ಳಲು ಬಳಸಿಕೊಳ್ಳಿ ಎಂದು ನುಡಿದರು.
ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಹುಟ್ಟುವಾಗಲೇ ಯಾರೂ ಸಾಧಕರಾಗುವುದಿಲ್ಲ. ಉತ್ತಮ ಗುಣಗಳನ್ನು ಬೆಳೆಸಿಕೊಂಡು ಕಷ್ಟಪಟ್ಟು ಗುರಿಯನ್ನು ಮುಟ್ಟಿದಾಗ ಮಾತ್ರ ಸಾಧನೆ ಆಗುತ್ತದೆ. ತಾಲ್ಲೂಕಿನಲ್ಲಿ ಹೆಚ್ಚು ಮಂದಿ ಸಾಧಕರು ಸೃಷ್ಟಿಯಾಗಬೇಕು ಎಂಬ ಉದ್ದೇಶದಿಂದ ಸಾಧಕರನ್ನು ಕರೆಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತಿರುವುದಾಗಿ ಹೇಳಿದರು.
ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಪ್ರೌಢಶಾಲೆ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ 27 ವಿದ್ಯಾರ್ಥಿಗಳು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲ್ಲೂಕಿನಲ್ಲಿ ಹೆಚ್ಚು ಅಂಕ ಗಳಿಸಿರುವ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು, ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳು, ಕನ್ನಡ ಶಿಕ್ಷಕರು, ಶೇಕಡಾ 100 ರಷ್ಟು ಫಲಿತಾಂಶ ಪಡೆದಿರುವ ತಾಲ್ಲೂಕಿನ ಏಳು ಶಾಲೆಗಳ ಮುಖ್ಯಶಿಕ್ಷಕರನ್ನು ಸನ್ಮಾನಿಸಲಾಯಿತು.
ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ನರಸಿಂಹಮೂರ್ತಿಗೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಪ್ರೋತ್ಸಾಹದಾಯಕವಾಗಿ ಲ್ಯಾಪ್‌ಟಾಪ್‌ ನೀಡಿದರು.
ತಾಲ್ಲೂಕು ಶಿಕ್ಷಣಾಧಿಕಾರಿ ಎಸ್‌.ರಘುನಾಥರೆಡ್ಡಿ, ಜಿಲ್ಲಾ ಕಸಾಪ ಮಾಜಿ ಕಾರ್ಯದರ್ಶಿ ಅಮೃತ್‌ಕುಮಾರ್‌, ಕನ್ನಡ ಸಾರಸ್ವತ ಪರಿಚಾರಿಕೆ(ಕಸಾಪ) ಸದಸ್ಯರಾದ ಎ.ಎಂ.ತ್ಯಾಗರಾಜ್, ಸತೀಶ್, ಚಾಂದ್‌ಪಾಷ, ದೇವರಾಜ್, ಕೊತ್ತನೂರು ನಾಗರಾಜ್, ಅಂಬರೀಷ್ ಹಾಜರಿದ್ದರು.

error: Content is protected !!