Home News ಜೆಡಿಎಸ್ ಮುಖಂಡರು ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದ್ದಾರೆ

ಜೆಡಿಎಸ್ ಮುಖಂಡರು ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದ್ದಾರೆ

0

ಆನೇಮಡುಗು ಗ್ರಾಮದಲ್ಲಿ ಮತ ಯಾಚಿಸುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಗ್ರಾಮದ ಮೋಹನ್ ಎಂಬ ವ್ಯಕ್ತಿ ಗ್ರಾಮದಲ್ಲಿ ಮತಯಾಚಿಸದಂತೆ ಬೆದರಿಸಿದ್ದಾನೆ. ಹಾಗಾಗಿ ನನಗೆ ರಕ್ಷಣೆ ನೀಡುವುದರ ಜೊತೆಗೆ ಗ್ರಾಮದಲ್ಲಿ ಮುಕ್ತ ಮತದಾನ ನಡೆಯುವಂತೆ ಕ್ರಮ ಜರುಗಿಸಬೇಕು ಎಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿರುವುದಾಗಿ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ವಿ.ಲೋಕೇಶ್ಗೌಡ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಯಾಚಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಫೆಬ್ರುವರಿ ೬ ರ ಶನಿವಾರ ಸಂಜೆ ತಾಲ್ಲೂಕಿನ ಆನೆಮಡುಗು ಗ್ರಾಮದಲ್ಲಿ ಮತಯಾಚನೆ ನಡೆಸುವಾಗ ಸ್ಥಳಕ್ಕೆ ಜೆಡಿಎಸ್ ಅಭ್ಯರ್ಥಿ ಡಾ.ಜಯರಾಮರೆಡ್ಡಿಯವರ ಚಿಕ್ಕಪ್ಪನ ಮಗ ಮೋಹನ್ಎಂಬಾತ ಬಂದು ಇನ್ನು ಸ್ವಲ್ಪ ಹೊತ್ತು ಇಲ್ಲೇ ಇದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಸುವುದರೊಂದಿಗೆ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ.
ಈ ಹಿಂದೆಯೂ ಅದೇ ಗ್ರಾಮದಲ್ಲಿ ಚುನಾವಣೆ ಸಮಯದಲ್ಲಿ ಹಲವಾರು ಭಾರಿ ಗಲಾಟೆಗಳಾಗಿರುವ ನಿದರ್ಶನಗಳಿರುವುದರಿಂದ ನನಗೂ ಹಾಗೂ ನನ್ನ ಕ್ಷೇತ್ರ ವ್ಯಾಪ್ತಿಯ ಆನೇಮಡುಗು ಗ್ರಾಮಸ್ಥರಿಗೆ ರಕ್ಷಣೆ ನೀಡುವುದರೊಂದಿಗೆ ಮುಕ್ತ ಮತದಾನ ಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ಚುನಾವಣಾಧಿಕಾರಿಗಳು ಕೈಗೊಳ್ಳಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ಮಾತನಾಡಿ, ಗೂಂಡಾಗಿರಿ ಮಾಡಿ ಜನರಿಂದ ಮತ ಪಡೆಯುವ ಇಂತಹವರು ಜನರಿಗೆ ಯಾವ ರೀತಿ ಸೇವೆ ಸಲ್ಲಿಸುತ್ತಾರೆ ಎನ್ನುವುದನ್ನು ಜನರು ಮನಗಾಣಬೇಕು. ಚುನಾವಣೆಯಲ್ಲಿ ಮತಯಾಚಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಅದನ್ನು ತಡೆಯುವುದರೊಂದಿಗೆ ಜೆಡಿಎಸ್ ಮುಖಂಡರು ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದ್ದಾರೆ ಎಂದರು.
ಕೇಂದ್ರದಲ್ಲಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಈ ಭಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ರಮೇಶ್ಬಾಯಿರಿ, ಬಿ.ಸಿ.ನಂದೀಶ್, ದಾಮೋದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.