ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜ ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ ಅವರಿಗೆ ಸಂಗೀತದ ಮೂಲಕವಷ್ಟೆ ಶ್ರದ್ಧಾಂಜಲಿಯನ್ನು ಅರ್ಪಿಸಲು ಸಾಧ್ಯವೆಂದು ತಾಲ್ಲೂಕಿನ ಸಂಗೀತ ಕಲಾವಿದರೆಲ್ಲ ಒಗ್ಗೂಡಿ ಸಂಗೀತ ಸ್ವರಾಂಜಲಿ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದು ಪಿಟೀಲು ವಿದ್ವಾನ್ ಜಿ.ಎನ್.ಶ್ಯಾಮಸುಂದರ್ ತಿಳಿಸಿದರು.
ನಗರದ ಕಾಳಿಕಾಂಬ ಕಮಠೇಶ್ವರಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಭಾನುವಾರ ಸಮಾನ ಮನಸ್ಕ ಸಂಗೀತ ಕಲಾವಿದರ ಬಳಗದಿಂದ ಆಯೋಜಿಸಿದ್ದ ಸ್ವರಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕ ಶೈಲಿಯ ಖ್ಯಾತ ಸಂಗೀತಗಾರರಲ್ಲಿ ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ ಅವರು ಅದ್ವಿತೀಯರು. ರಾಗ, ತಾಳ, ಗಾನ, ಪಲ್ಲವಿಯ ಹೊಸ ಪ್ರಯೋಗಗಳ ಹರಿಕಾರರು. ಭಾರತ ದೇಶ ಕಂಡ ಮಹಾನ್ ವಾಗ್ಗೇಯಕಾರರು. ಒಟ್ಟು 18,000 ಸಂಗೀತ ಕಚೇರಿಗಳನ್ನು ನೀಡಿರುವ ಅವರು ಸಂಗೀತ ಕಲಾವಿದರಿಗೆಲ್ಲ ಅವರು ಸ್ಫೂರ್ತಿ ಎಂದು ಹೇಳಿದರು.
ತಾಲ್ಲೂಕಿನ ವಿವಿಧ ಕಲಾವಿದರುಗಳು 17ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆಸಿಕೊಟ್ಟರು.
ಜೆ.ರೇಖಾ, ವಿ.ಎಲ್.ನಾರಾಯಣಸ್ವಾಮಿ, ವಿ.ಪಿ.ಶಿವಶಂಕರ, ಮಂಜುಳ ಜಗದೀಶ್, ವೆಂಕಟೇಶಪ್ಪ, ಶ್ರೀನಿವಾಸ್, ವೇಣುಗೋಪಾಲ್, ದ್ಯಾವಪ್ಪ, ಶ್ರೇಯಸ್ ಸಿಂಹ, ಮುನಿಆಂಜಿನಪ್ಪ, ಕಿಶೋರ್ ಕುಮಾರ್, ರಾಮಕೃಷ್ಣಪ್ಪ, ವೆಂಕಟನಾರಾಯಣಪ್ಪ ಮುಂತಾದವರು ಗಾಯನವನ್ನು ನಡೆಸಿಕೊಟ್ಟರು. ಜಗದೀಶ್ ಕುಮಾರ್ ಮತ್ತು ಜಿ.ಎನ್.ಶ್ಯಾಮಸುಂದರ್ ಪಿಟೀಲು ದ್ವಂದ್ವವನ್ನು ನಡೆಸಿಕೊಟ್ಟರು. ವಿವಿಧ ಕಲಾವಿದರು ಮೃದಂಗ, ತಬಲ, ಖಂಜಿರ, ಘಟವನ್ನು ನುಡಿಸಿ ಸಾಥ್ ನೀಡಿದರು.