ತಾಲ್ಲೂಕಿನ ಅಬ್ಲೂಡು ಗ್ರಾಮದಲ್ಲಿ ಡಿಸಂಬರ್ 5ರ ಶುಕ್ರವಾರ ತಾಲ್ಲೂಕು ಒಕ್ಕಲಿಗರ ಯುವ ಸೇನೆ ಮತ್ತು ಅಬ್ಲೂಡು ಗ್ರಾಮ ಪಂಚಾಯತಿ ಒಕ್ಕಲಿಗರ ಯುವಸೇನೆ ವತಿಯಿಂದ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮಿಗಳು ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಪಟ್ಟಣದಿಂದ ವಿವಿಧ ಗ್ರಾಮಗಳ ಪಲ್ಲಕ್ಕಿಗಳು, ಕಲಾತಂಡಗಳೊಂದಿಗೆ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮಿಗಳನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುವುದು. ನಾಡಿನ ಹಿರಿಮೆ ಗರಿಮೆ ಸಾರುವ ಸ್ಥಬ್ದ ಚಿತ್ರಗಳು, ಜನಪದ ಸಿರಿಯನ್ನು ಸಾರುವ ವಿವಿಧ ವೇಷಭೂಷಣಗಳು, ಮಂಗಳವಾದ್ಯಗಳು ಮೆರವಣಿಗೆಯಲ್ಲಿರುತ್ತವೆ. ಅಬ್ಲೂಡಿನ ಗ್ರಾಮದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಅಬ್ಲೂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹತ್ತು ಮಂದಿ ಸಾಧಕರಿಗೆ ಸನ್ಮಾನ ಇರುತ್ತದೆ. ಹತ್ತು ಸಾವಿರ ಮಂದಿಗೆ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಿರುವುದಾಗಿ ತಿಳಿಸಿದರು.
ಅಬ್ಲೂಡು ಗ್ರಾಮ ಪಂಚಾಯತಿ ಒಕ್ಕಲಿಗ ಯುವ ಸೇನೆ ಅಧ್ಯಕ್ಷ ಪ್ರತಾಪ್, ತಾಲ್ಲೂಕು ಅಧ್ಯಕ್ಷ ಜೆ.ವಿ.ವೆಂಕಟಸ್ವಾಮಿ, ಉಪಾಧ್ಯಕ್ಷ ಆರ್.ಎ.ಉಮೇಶ್, ನಗರ ಘಟಕ ಅಧ್ಯಕ್ಷ ಪುರುಷೋತ್ತಮ್, ಪದಾಧಿಕಾರಿಗಳಾದ ಮುರಳಿ, ಗೋಪಾಲ್, ತ್ಯಾಗರಾಜ್, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.