Home News ಡಿ.ಕೆ.ರವಿ ಸ್ಮರಣಾರ್ಥ ‘ದೊಡ್ಡಕೊಪ್ಪಲುವಿನಿಂದ ಕೋಲಾರದವರೆಗೆ’ ಶಿಕ್ಷಣದ ಪಾದಯಾತ್ರೆ

ಡಿ.ಕೆ.ರವಿ ಸ್ಮರಣಾರ್ಥ ‘ದೊಡ್ಡಕೊಪ್ಪಲುವಿನಿಂದ ಕೋಲಾರದವರೆಗೆ’ ಶಿಕ್ಷಣದ ಪಾದಯಾತ್ರೆ

0

ದಿವಂಗತ ಡಿ.ಕೆ.ರವಿ ಅವರ ಸ್ಮರಣಾರ್ಥ ‘ದೊಡ್ಡಕೊಪ್ಪಲುವಿನಿಂದ ಕೋಲಾರದವರೆಗೆ’ ಶಿಕ್ಷಣದ ಪಾದಯಾತ್ರೆ ಕೈಗೊಂಡಿರುವ ಎಚ್.ಸಿ.ಲಾವಣ್ಯ ತಾಲ್ಲೂಕಿಗೆ ಸೋಮವಾರ ಆಗಮಿಸಿದ್ದಳು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹೇಮದಳದ ಸರ್ಕಾರಿ ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿನಿ ಎಚ್.ಸಿ.ಲಾವಣ್ಯ ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗಬೇಕು, ಶಿಕ್ಷಣ ವಂಚಿತರನ್ನು ಶಾಲೆಗೆ ಕರೆತರಬೇಕು ಎಂಬ ವಿಷಯವಾಗಿ ಅರಿವು ಮೂಡಿಸುತ್ತಾ ಪಾದಯಾತ್ರೆಯನ್ನು ನಡೆಸಿದ್ದಾಳೆ. ಪಾದಯಾತ್ರೆಯ ಹನ್ನೆರಡನೆಯ ದಿನ ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಶಾಲೆ ಹಾಗೂ ನಡಿಪಿನಾಯಕನಹಳ್ಳಿ ನವೋದಯ ಶಾಲೆಗಳಿಗೆ ಭೇಟಿ ನೀಡಿದಳು.
‘ದಿವಂಗತ ಡಿ.ಕೆ.ರವಿ ಅವರ ಜನ್ಮಸ್ಥಳ ದೊಡ್ಡಕೊಪ್ಪಲು ಗ್ರಾಮದಿಂದ ಪ್ರಾರಂಭಿಸಿ ಇದುವರೆಗೂ ಸುಮಾರು 50 ಸಾವಿರ ಕರಪತ್ರಗಳನ್ನು ಹಂಚಿಕೊಂಡು ಮಾರ್ಗಮಧ್ಯೆ ಸಿಗುವ ಪ್ರತಿಯೊಂದು ಗ್ರಾಮ, ಶಾಲೆಗೂ ಭೇಟಿ ನೀಡುತ್ತಾ ಶಿಕ್ಷಣದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಬಡ ಮಕ್ಕಳು ಕೂಡ ಪ್ರತಿಭಾವಂತರು, ಉನ್ನತ ಶಿಕ್ಷಣ ಹೊಂದಲು ಸಾಧ್ಯ ಎಂಬುದಕ್ಕೆ ದಿವಂಗತ ಡಿ.ಕೆ.ರವಿ ಅವರೇ ಉದಾಹರಣೆ. ಅವರ ಪ್ರೇರಣೆಯಿಂದ ಈ ಪಾದಯಾತ್ರೆ ನಡೆಸುತ್ತಿರುವ ನನ್ನ ಮಗಳು ಈಗ ಸಮಾಜದ ಮಗಳಾಗಿದ್ದಾಳೆ’ ಎಂದು ಎಚ್.ಸಿ.ಲಾವಣ್ಯ ತಂದೆ ಈರಯ್ಯ ತಿಳಿಸಿದರು.
‘ನಾವು ಶಿಕ್ಷಣದಿಂದ ಎಂದೂ ಹಿಂದೆ ಸರಿಯುವುದಿಲ್ಲ. ನಮ್ಮ ಶಾಲೆಯ ಗುರು ಹಿರಿಯರನ್ನು ಪೂಜ್ಯ ಭಾವನೆಯಿಂದ ಪ್ರೀತಿಸುತ್ತೇವೆ. ಶಿಕ್ಷಣದಿಂದ ವಂಚಿತರಾಗಿ ಶಿಕ್ಷಣದಿಂದ ದೂರವಿರುವ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುತ್ತೇವೆ. ನಾವು ಉತ್ತಮ ಉನ್ನತ ಶಿಕ್ಷಣ ಪಡೆದು ಪರಿಶುದ್ಧ ಸಮಾಜ ನಿರ್ಮಿಸುತ್ತೇವೆ. ಪರಿಶುದ್ಧ ಪರಿಸರ ನಿರ್ಮಿಸುತ್ತೇವೆ. ಈ ಪಂಚತತ್ವಗಳನ್ನು ಅನುಸರಿಸುತ್ತೇವೆಂದು ವಾಗ್ದಾನ ಮಾಡುತ್ತೇವೆ’ ಎಂಬ ಪ್ರಮಾಣವಚನವನ್ನು ಶಾಲಾ ವಿದ್ಯಾರ್ಥಿಗಳಿಗೆ ಎಚ್.ಸಿ.ಲಾವಣ್ಯ ಬೋಧಿಸಿದಳು.
ವಕೀಲ ಸುರೇಶ್ಗೌಡ, ವೆಂಕಟೇಶಪ್ಪ, ಚಂದ್ರಶೇಖರ್, ರಂಜಿತ್, ನಡಿಪಿನಾಯಕನಹಳ್ಳಿ ಶಾಲೆಯ ಸಂಸ್ಥಾಪಕ ಕೃಷ್ಣಮೂರ್ತಿ, ಸತ್ಯನಾರಾಯಣ, ಸುದರ್ಶನ್, ಜಂಗಮಕೋಟೆ ಸರ್ಕಾರಿ ಶಾಲೆಯ ಎಂ.ನಾರಾಯಣಸ್ವಾಮಿ, ಪದ್ಮ, ಮಂಜುನಾಥ್, ವಾಣಿಶ್ರೀ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.